ಮಂಗಳೂರು(ದಕ್ಷಿಣಕನ್ನಡ):ಮಾದಕ ದ್ರವ್ಯ ಗಾಂಜಾವನ್ನು ಸೇವನೆ ಮತ್ತು ಮಾರಾಟ ಮಾಡಿದ ಎರಡು ಪ್ರಕರಣದಲ್ಲಿ ಮಂಗಳೂರು ನಗರ ಪೊಲೀಸರು ಮೂವರು ಸ್ಮಗ್ಲರ್ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಗಾಂಜಾ ಮಾರಾಟ ಮಾಡಿದ ಪ್ರಕರಣದಲ್ಲಿ ಒರಿಸ್ಸಾ ಮೂಲದವರಾದ ಚಿಂತಾಮಣಿ, ದೂಬ ಮತ್ತು ನಗರದ ಬೈಕಂಪಾಡಿ ಮಿನಾಕಳಿಯ ನಿವಾಸಿ ವಿಕ್ರಂ ಯಾನೆ ಜಯರಾಂ ಬಂಧಿತರು. ಗಾಂಜಾ ಸೇವನೆ ಮಾಡಿದ ಪ್ರಕರಣದಲ್ಲಿ ನಗರದ ಕೊಡಿಯಲ್ ಬೈಲ್ ಸತೀಶ್, ಕುಳಾಯಿ ಹೊನ್ನಕಟ್ಟೆಯ ಸರ್ಫರಾಜ್, ಬೈಕಂಪಾಡಿಯ ಅಕ್ಷಯ್ ಬಂಧಿತರಾಗಿದ್ದಾರೆ.
ಪ್ರಕರಣ ಒಂದು;ಮಾರ್ಚ್ 26ರ ಸಂಜೆ 6 ಗಂಟೆಗೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿ ಗ್ರಾಮದಲ್ಲಿ ಕೊಣೆಯೊಂದರಲ್ಲಿ ಕೆಲ ಯುವಕರು ಸೇರಿಕೊಂಡು ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವುದು ಮತ್ತು ಸೇದುವುದು ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಇದರ ಮೇರೆಗೆ ಉತ್ತರ ಪೊಲೀಸ್ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯಕ್ ರವರ ಆದೇಶ ಮತ್ತು ನಿರ್ದೇಶನದ ಮೇರೆಗೆ ಸುರತ್ಕಲ್ ಠಾಣಾ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಪ್ರದೀಪ್ ಟಿ.ಆರ್. ಮತ್ತು ಸಿಬ್ಬಂದಿಗಳಾದ ಅಣ್ಣಪ್ಪ, ಅಜೀತ್ ಮ್ಯಾಥ್ಯೂ, ದಿಲೀಪ್, ಕಾರ್ತಿಕ್ ರವರ ತಂಡ ದಾಳಿ ಮಾಡಿದ್ದಾರೆ.
ಈ ಸ್ಥಳದ ರೂಮ್ ನಲ್ಲಿ ನಾಲ್ಕು ಜನ ವ್ಯಕ್ತಿಗಳು ಗಾಂಜಾವನ್ನು ಹಾಕಿಕೊಂಡು ಸಿಗರೇಟ್ ಮಾದರಿಯಲ್ಲಿ ಸೇದುತ್ತಿರುವುದು ಕಂಡು ಬಂದಿದೆ. ರೂಮ್ ನೊಳಗೆ ಹೋಗಿ ನೋಡಿದಾಗ ಗಾಂಜಾ ತುಂಬಿದ ಪಾಕೆಟ್ ಗಳು ದೊರೆತಿದೆ. ನಾಲ್ಕು ಮಂದಿಯಲ್ಲಿ ವಿಕ್ರಂ ಯಾನೆ ಜಯರಾಂ ಎಂಬಾತನು ಇತರರಿಗೆ ಗಾಂಜಾ ಮಾದಕ ವಸ್ತುವನ್ನು ತಂದು ಹಣಕ್ಕೆ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಈತನನ್ನು ಕೂಲಂಕುಷವಾಗಿ ವಿಚಾರಿಸಿದಾಗ ಆತನು ಬಂದಿದ್ದ ಆಟೋರಿಕ್ಷಾದಲ್ಲಿ 750 ಗ್ರಾಂ ಗಾಂಜಾ ಮತ್ತು ತೂಕದ ಮಾಪನ ಮತ್ತು ಗಾಂಜಾ ಪ್ಯಾಕ್ ಮಾಡುವ ಖಾಲಿ ಪ್ಯಾಕೆಟ್ ಗಳು ದೊರೆತಿದೆ. ಪಂಚರ ಸಮಕ್ಷಮ ಸದರಿ ಸ್ವತ್ತುಗಳನ್ನು ಮತ್ತು ಆರೋಪಿತರನ್ನು ವಶಪಡಿಸಿಕೊಳ್ಳಲಾಗಿದೆ.