ಕರ್ನಾಟಕ

karnataka

By

Published : Aug 25, 2022, 5:24 PM IST

Updated : Aug 25, 2022, 5:52 PM IST

ETV Bharat / state

ಮೆದುಳಿನಿಂದ ಬಾಯಿಯೊಳಗೆ ಬಂದ 18 ಸೆಂ.ಮೀ. ಕ್ಯಾನ್ಸರ್ ಗಡ್ಡೆ.. ಮಂಗಳೂರಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

ಕಣಚೂರು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಡಾ.ರವಿವರ್ಮ, ಡಾ.ಗುರುಪ್ರಸಾದ್ ಮತ್ತು ಡಾ.ನಜೀಬ್ ನೇತೃತ್ವದ ತಂಡ ಅಧ್ಯಯನ ನಡೆಸಿ ಬಾಲಕನ ಬಾಯಿಯಲ್ಲಿದ್ದ 18 ಸೆ. ಮೀ ದೊಡ್ಡ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

Derlakatta Kanachur Hospital
ದೇರಳಕಟ್ಟೆ ಕಣಚೂರು ಆಸ್ಪತ್ರೆ

ಮಂಗಳೂರು: 17 ವರ್ಷದ ಬಾಲಕನೊಬ್ಬನ ಮೆದುಳಿನಿಂದ ಆರಂಭವಾಗಿ ಬಾಯಿಯೊಳಗೆ ಇಳಿದ ಕ್ಯಾನ್ಸರ್ ಗಡ್ಡೆಯನ್ನು ಮಂಗಳೂರಿನ ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದೆ.

ಆಪರೇಷನ್​ ಯಶಸ್ವಿ.. ಆತನನ್ನು ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆತನ ಮುಖದ ಚಿತ್ರಣವೆ ಬದಲಾಗಿತ್ತು. ಮೆದುಳಿನಿಂದ ಬಾಯಿಯೊಳಗೆ ಇಳಿದ 18 ಸೆಂ.ಮೀ ಗಡ್ಡೆ ಆತನ ಬದುಕನ್ನೇ ಕಸಿಯುವಂತಿತ್ತು. ಈವರೆಗೆ ಎಲ್ಲಿಯೂ ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಿರುವ ಘಟನೆಯೆ ನಡೆಯದ ನಡುವೆ ಮಂಗಳೂರಿನ ಕಣಚೂರು ಆಸ್ಪತ್ರೆ ವೈದ್ಯರ ತಂಡ ಅಪಾಯವನ್ನು ಮುಂದಿಟ್ಟುಕೊಂಡು ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದೆ.

ಕೊಪ್ಪದ 17 ವರ್ಷದ ಬಾಲಕನಲ್ಲಿ ಕ್ಯಾನ್ಸರ್ ಗಡ್ಡೆಯೊಂದು ಮೆದುಳಿನಲ್ಲಿ ಬೆಳೆದು ಬಾಯಿಯೊಳಗೆ ಇಳಿದಿತ್ತು. ಬಾಲಕನನ್ನು ದಯನೀಯ ಸ್ಥಿತಿಯಲ್ಲಿ ಆತನ ಹೆತ್ತವರು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದರೂ ಮೆದುಳಿನಿಂದ ಬಂದಿರುವ ಈ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲು ಸಾಧ್ಯವಿಲ್ಲ ಎಂದು ವಾಪಸು ಕಳುಹಿಸಿದ್ದರು.

ಬಾಲಕನಿಗೆ ಹೊಸ ಬದುಕು.. ಕಣಚೂರು ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಂಡ ವ್ಯಕ್ತಿಯೊಬ್ಬರು ನೀಡಿದ ಸಲಹೆಯಂತೆ ಬಾಲಕನ ಪೋಷಕರು ಕಣಚೂರು ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿದ್ದಾರೆ. ಈ ವೈದ್ಯರು ಬಾಲಕನಿಗೆ ಹೊಸ ಜೀವನವನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಣಚೂರು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಡಾ.ರವಿವರ್ಮ, ಡಾ.ಗುರುಪ್ರಸಾದ್ ಮತ್ತು ಡಾ.ನಜೀಬ್ ನೇತೃತ್ವದ ತಂಡ ಅಧ್ಯಯನ ನಡೆಸಿ 18 ಸೆ. ಮೀ ದೊಡ್ಡ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಈ ಅಪಾಯಕಾರಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ ಬಳಿಕ ಬಾಲಕ ಇದೀಗ ಚೇತರಿಸಿಕೊಂಡಿದ್ದಾನೆ.

ಮಂಗಳೂರಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

ಇನ್ನೂ ಒಂದು ವರ್ಷ ಚಿಕಿತ್ಸೆ: ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಕಣ್ಣು ಕೆಳಗೆ ಇಳಿಯುವುದು, ಬಾಯಿಯಿಂದ ತಿಂಡಿ ನೀಡಿದರೆ ಗಡ್ಡೆ ತೆಗೆದ ಜಾಗದಲ್ಲಿ ಕೂರುವ ಅಪಾಯವಿತ್ತು. ಅದನ್ನು ಚಿಕಿತ್ಸೆ ಮೂಲಕ ಸರಿಪಡಿಸಲಾಗಿದೆ. ಬಾಲಕನ ಮುಖದಿಂದ ತೆಗೆದ ಗಡ್ಡೆಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ RHABDOMYOSARCOMA ಕ್ಯಾನ್ಸರ್ ಎಂಬುದು ತಿಳಿದುಬಂದಿದೆ. ಕ್ಯಾನ್ಸರ್ ಗಡ್ಡೆಗಳು ಈ ಭಾಗದಲ್ಲಿ ಬೆಳೆಯುವ ಹಲವು ಪ್ರಕರಣಗಳು ಇವೆ. ಆದರೆ RHABDOMYOSARCOMA ಕ್ಯಾನ್ಸರ್ ಈ ಬೋನ್​ನಲ್ಲಿ ಬೆಳೆಯುವ ಪ್ರಕರಣ ಅತಿ ವಿರಳ ಎಂಬುದು ವೈದ್ಯರ ಅಭಿಪ್ರಾಯ. ಬಾಲಕನಿಗೆ ಚಿಕಿತ್ಸೆ ಮುಂದುವರಿಸಲಾಗಿದ್ದು, ಇನ್ನೂ ಒಂದು ವರ್ಷದ ಚಿಕಿತ್ಸೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಸಣ್ಣ ಮಕ್ಕಳಲ್ಲಿ ಈ ಕ್ಯಾನ್ಸರ್ ಗಡ್ಡೆ ಮರುಕಳಿಸುವ ಸಾಧ್ಯತೆ ವಿರಳವಾಗಿರುವುದರಿಂದ ಬಾಲಕನು‌ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ವಿಶ್ವಾಸ ಮೂಡಿಸಿದೆ.

ಆಸ್ಪತ್ರೆಯಿಂದ ಉಚಿತ ಚಿಕಿತ್ಸೆ: ಕಣಚೂರು ಆಸ್ಪತ್ರೆಯಲ್ಲಿ ಬಾಲಕನಿಗೆ ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮೊದಲ ಬಾರಿಗೆ ಆಯುಷ್ಮಾನ್ ಯೋಜನೆಯಡಿ, ಎರಡನೇ ಶಸ್ತ್ರಚಿಕಿತ್ಸೆ ಆಸ್ಪತ್ರೆ ವತಿಯಿಂದ ಉಚಿತವಾಗಿ ಮಾಡಲಾಗಿದೆ. ಈ ಶಸ್ತ್ರಚಿಕಿತ್ಸೆಗೆ ಮುನ್ನ ಬಾಲಕನಿಗೆ ಕೀಮೋಥೆರಪಿ, ರೇಡಿಯೋಥೆರಪಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಚಿಕಿತ್ಸೆ ಬಳಿಕವು ಗಡ್ಡೆಯು ವೃದ್ಧಿಸುತ್ತಿದ್ದ ಕಾರಣದಿಂದಾಗಿ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದ್ದರು.

ವೈದ್ಯ ತಂಡದ ಸಹಕಾರ: ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ತರುವ ಸಂದರ್ಭದಲ್ಲಿ ಆತನಿಗೆ ಆಹಾರ ಸೇವಿಸಲು ಸಾಧ್ಯವಾಗಿರಲಿಲ್ಲ. ಕೇವಲ ದ್ರವ ರೂಪದಲ್ಲಿ ಆಹಾರವನ್ನು ನೀಡಲಾಗುತ್ತಿತ್ತು. ಇದೇ ವರ್ಷದ ಫೆಬ್ರವರಿ 22 ರಂದು ಮೊದಲ ಶಸ್ತ್ರಚಿಕಿತ್ಸೆ ಬಳಿಕ ಬಾಲಕನಿಗೆ ನಾಸೋ ಗ್ಯಾಸ್ಟ್ರಿಕ್‌ ಟ್ಯೂಬ್ ಬಳಸಿ ಆಹಾರವನ್ನು ನೀಡಲಾಯಿತು. ಒಂದು ತಿಂಗಳ ಬಳಿಕ ನಡೆದ ಎರಡನೇ ಶಸ್ತ್ರಚಿಕಿತ್ಸೆಯ ನಂತರ ಆಹಾರ ಸೇವಿಸಲು ಸಾಧ್ಯವಾಗುತ್ತಿದೆ. ಇದಕ್ಕಾಗಿ ಡಾ. ಪದ್ಮರಾಜ್ ಹೆಗ್ಡೆ, ಡಾ ಚೇತನ್, ಡಾ. ರವಿವರ್ಮ ಅವರು ಶ್ರಮಿಸಿದ್ದಾರೆ.

ಬಾಲಕನಿಗೆ ಶಸ್ತ್ರಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅರಿವಳಿಕೆ ನೀಡುವುದು ಸವಾಲಾಗಿತ್ತು. ಆದರೆ ಇದನ್ನು ಡಾ.ವಿನ್ಸೆಂಟ್ ಮಥಿಯಾಸ್ ಮತ್ತು ಡಾ. ಸಂಭ್ರಮ್ ಅವರ ತಂಡ ಯಶಸ್ವಿಯಾಗಿ ಮಾಡಿದೆ. ಒಟ್ಟಿನಲ್ಲಿ ವೈದ್ಯರ ಜರ್ನಲ್​ಗಳಲ್ಲಿ ಈವರೆಗೆ ಪ್ರಕಟವಾಗದೆ ಇರುವ ಇಷ್ಟು ದೊಡ್ಡದಾದ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಮಂಗಳೂರಿನ ಕಣಚೂರು ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ವೈದ್ಯರು ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ :ವಿದ್ಯುತ್​​​​​ ತಂತಿ ಸ್ಪರ್ಶಿಸಿ ಬಾಲಕ ಆಸ್ಪತ್ರೆ ಸೇರಿದ ಪ್ರಕರಣ... ಚಿಕಿತ್ಸೆಗೆ ಸ್ಪಂದಿಸುತ್ತಿರೋ ನಿಖಿಲ್​​

Last Updated : Aug 25, 2022, 5:52 PM IST

ABOUT THE AUTHOR

...view details