ಪುತ್ತೂರು: ಬಿಜೆಪಿಯ ಭೀಷ್ಮನೆಂದೇ ಹೆಸರಾಗಿದ್ದ ಕರಾವಳಿ ಕರ್ನಾಟಕದ ಬಿಜೆಪಿಯ ಹಿರಿಯ ನೇತಾರ, ಮಾಜಿ ಶಾಸಕ ಉರಿಮಜಲು ಕೆ. ರಾಮಭಟ್ (92) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಈ ಮೊದಲು ಆಸ್ಪತ್ರೆಗೂ ದಾಖಲಾಗಿದ್ದರು.
ಆರಂಭಿಕ ಜೀವನ
ಬಂಟ್ವಾಳ ತಾಲೂಕಿನ ಉರಿಮಜಲು ಎಂಬಲ್ಲಿ ಅವಿಭಕ್ತ ಹವ್ಯಕ ಕುಟುಂಬದಲ್ಲಿ ಜನಿಸಿದ ರಾಮ ಭಟ್ ಅವರು ತಮ್ಮ ಪ್ರೌಢ ಶಿಕ್ಷಣದ ವೇಳೆಯಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದರು.
ರಾಮಭಟ್ ಅವರು ಬೆಳಗಾವಿಯಲ್ಲಿ ತಮ್ಮ ಕಾನೂನು ಪದವಿಯನ್ನು ಮುಗಿಸಿದ ಬಳಿಕ ಮಂಗಳೂರಿನಲ್ಲಿ ಭಾರತೀಯ ಮಜ್ದೂರು ಸಂಘದ ಮೂಲಕ ತಮ್ಮ ಸಾರ್ವಜನಿಕ ಜೀವನವನ್ನು ಆರಂಭಿಸಿದ್ದರು.
ಮಾಜಿ ಶಾಸಕ ಉರಿಮಜಲು ಕೆ. ರಾಮಭಟ್ ಹಂಚಿನ ಕಾರ್ಖಾನೆಯ ಕಾರ್ಮಿಕರ ಸಮಸ್ಯೆಯ ಕುರಿತು ನಿರಂತರ ಹೋರಾಟಗಳನ್ನು ಮಾಡುತ್ತಾ ಬಂದ ರಾಮಭಟ್ ಬಳಿಕ ರಾಜಕೀಯವಾಗಿ ಭಾರತೀಯ ಜನಸಂಘವನ್ನು ಸೇರಿದರು. ಮೂಲತಃ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದ ರಾಮ ಭಟ್‌ಅವರು ಪುತ್ತೂರಿನಲ್ಲಿ ಭಾರತೀಯ ಜನಸಂಘದ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ್ದರು. ಭಾರತೀಯ ಜನಸಂಘದ ಅಭ್ಯರ್ಥಿಯಾಗಿಯೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.
ರಾಷ್ಟ್ರೀಯ ನಾಯಕರೊಂದಿಗೂ ನಿಕಟ ಸಂಬಂಧ
ಬಳಿಕ ರಾಜಕೀಯಕ್ಕೆ ಇಳಿದು ಪುತ್ತೂರು ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಷ್ಟ್ರೀಯ ಮಟ್ಟದ ಮುಖಂಡರಾಗಿದ್ದ ಅಟಲ್‌ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿಯಂತಹ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
ಪುತ್ತೂರಿನಲ್ಲಿ ಭಾರತೀಯ ಜನಸಂಘವನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರಾದ ರಾಮಭಟ್ ಅವರು ಗ್ರಾಮ ಪಂಚಾಯತ್ ಪರಿವರ್ತಿತ ಪುತ್ತೂರು ಪುರಸಭೆಯ ಪ್ರಥಮ ಅಧ್ಯಕ್ಷರಾಗುವ ಮೂಲಕ ಪುತ್ತೂರು ಪುರಸಭೆಯಲ್ಲಿ 1972ರ ದಶಕದಲ್ಲಿ ಭಾರತೀಯ ಜನಸಂಘವನ್ನು ಅಧಿಕಾರಕ್ಕೆ ತಂದಿದ್ದರು. 1974ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಅಂದಿನ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಮಾಜಿ ಶಾಸಕ ಉರಿಮಜಲು ಕೆ. ರಾಮಭಟ್ ಹಲವು ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ
ಈ ಮೂಲಕ ಪುತ್ತೂರಿನ ಪ್ರಥಮ ಕಾಂಗ್ರೇಸೇತರ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 1983ರಲ್ಲಿ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜನತಾ ಪಕ್ಷದ ಸಂಯುಕ್ತ ಅಭ್ಯರ್ಥಿಯಾಗಿ ಅಂದಿನ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬೆಂಬಲಿತ ಆಡಳಿತ ಅಧಿಕಾರಕ್ಕೆ ಬಂದಾಗ ಮಾಜಿ ಶಾಸಕರಾಗಿದ್ದ ಅವರು ಕ್ಯಾಂಪ್ಕೋದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸಹಕಾರಿ ಚಳವಳಿಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು.
ಮಾಜಿ ಶಾಸಕ ಉರಿಮಜಲು ಕೆ. ರಾಮಭಟ್ ಇಂದಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ಪುತ್ತೂರು ಎಜುಕೇಶನ್ ಸೊಸೈಟಿ ಎಂಬ ಹೆಸರಿನಲ್ಲಿ ಆರಂಭವಾಗಿತ್ತು. ಈ ಸೊಸೈಟಿಯ ಅಧೀನದಲ್ಲಿ ಸ್ಥಾಪನೆಗೊಂಡ ಪುತ್ತೂರು ವಿವೇಕಾನಂದ ಕಾಲೇಜ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ವಿವೇಕಾನಂದ ಸಮೂಹ ಶಿಕ್ಷಣ ಸಂಸ್ಥೆಗಳ ಸರ್ವ ಅಧ್ಯಕ್ಷರಾಗಿ ಸುದೀರ್ಘ ಕಾಲದ ಸೇವೆ ಸಲ್ಲಿಸಿದ್ದರು.
ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಅಧೀನ ಹಲವಾರು ಪ್ರೌಢಶಾಲೆಗಳನ್ನು ಸ್ಥಾಪಿಸುವಲ್ಲಿ ಮತ್ತು ವಿವೇಕಾನಂದ ಹೆಸರಿನ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಕೆ. ರಾಮಭಟ್ ಕಾರಣರಾಗಿದ್ದರು.
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಕೆ. ರಾಮಭಟ್ ಧಾರ್ಮಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಅಧೀನದಲ್ಲಿರುವ ಮಂಗಳೂರು ಹೋಬಳಿ ಹವ್ಯಕ ಸಮಿತಿಯ ಅಧ್ಯಕ್ಷರಾಗಿ ವಿವಿಧ ದೇವಾಲಯಗಳ ನವೀಕರಣದ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು.
ಮಾಜಿ ಶಾಸಕ ಉರಿಮಜಲು ಕೆ. ರಾಮಭಟ್ ಮೃತರು ಪತ್ನಿ ಸವಿತ ಭಟ್, ಪುತ್ರ ರವಿ ಭಟ್, ಪುತ್ರಿಯರಾದ ಜ್ಯೋತಿ ಭಟ್, ಸಂಧ್ಯಾ ಭಟ್ ಅವರನ್ನು ಅಗಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್ ಮತ್ತಿತರರು ರಾಮಭಟ್ ಅವರ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಅವರ ಮನೆಗೆ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.