ಮಂಗಳೂರು: ನಗರದಲ್ಲಿ 7 ಬ್ಲಾಕ್ ಫಂಗಸ್ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ಚಿತ್ರದುರ್ಗ ಮೂಲದ ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ದೃಢಪಡಿಸಿದ್ದಾರೆ.
ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಯೆನೆಪೋಯ, ಕೆ.ಎಸ್.ಹೆಗ್ಡೆ, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಚಿತ್ರದುರ್ಗ, ದಾವಣಗೆರೆ, ಬೆಂಗಳೂರು, ಚಿಕ್ಕಮಗಳೂರು ಮೂಲದ ಐವರಿಗೆ ಹಾಗೂ ಮಂಗಳೂರಿನ ಇಬ್ಬರಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ.
ಕೊರೊನಾ ಸೋಂಕು ಅತಿರೇಕ ತಲುಪಿದಾಗ, ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಅಲ್ಲದೇ ವೆಂಟಿಲೇಟರ್ನಲ್ಲಿ ದೀರ್ಘಾವಧಿಯಿಂದ ಇರುವ ಸೋಂಕಿತರಲ್ಲಿ ಶಿಲೀಂಧ್ರಗಳ ದಾಳಿಯಿಂದ ಈ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತದೆ. ಆದರೆ, ಅತ್ಯಂತ ವಿರಳ ಪ್ರಕರಣದಲ್ಲಿ ಈ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಹೆಚ್ಚು ಬ್ಲಾಕ್ ಫಂಗಸ್ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಇದರ ಲಸಿಕೆಗೂ ಬೇಡಿಕೆ ಹೆಚ್ಚಿದೆ. ಇದೀಗ ಇದರ ಇಂಜೆಕ್ಷನ್ ಕೊರತೆ ಉಂಟಾಗಿದೆ. ಆದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉಳ್ಳವರಿಗೆ, ಸರಿಯಾಗಿ ವ್ಯಾಯಾಮ ಮಾಡುವವರಲ್ಲಿ ಈ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:ಸೂಕ್ತ ಚಿಕಿತ್ಸೆ ನೀಡದೇ ಬ್ಲಾಕ್ ಫಂಗಸ್ಗೆ ವೃದ್ಧೆ ಬಲಿ..? ವೈದ್ಯರ ವಿರುದ್ಧ ಕುಟುಂಬಸ್ಥರ ಆರೋಪ