ಮಂಗಳೂರು:60 ವಯಸ್ಸು ದಾಟಿದರೆ ಅದು ನಿವೃತ್ತಿ ವಯಸ್ಸೆಂದು ಅನೇಕರು ಮನೆಯೊಳಗೆ ಬೆಚ್ಚಗೆ ಕುಳಿತು ಬಿಡುತ್ತಾರೆ. ಅಂಥದ್ರಲ್ಲಿ ಹರಿಯಾಣ ರಾಜ್ಯದ 63 ವರ್ಷದ ಈ ಮಹಿಳೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕಲ್ನಲ್ಲಿಯೇ ಪ್ರಯಾಣಿಸುವ ಸಾಹಸದ ಕೆಲಸಕ್ಕೆ ಕೈ ಹಾಕಿದ್ದಾರೆ.
ಇವರ ಹೆಸರು ಕಮಲೇಶ್ ರಾಣಾ. 2005ರಿಂದ ಯೋಗ ಮತ್ತು ಅಥ್ಲೆಟಿಕ್ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಮಲೇಶಿಯಾದಲ್ಲಿ ನಡೆದ ಏಷ್ಯನ್ ಮಾಸ್ಟರ್ ಅಥ್ಲೆಟಿಕ್ ಮೀಟ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮಧುಮೇಹ ಕಾರಣದಿಂದಾಗಿ 2019ರಲ್ಲಿ ಸೈಕ್ಲಿಂಗ್ ಆರಂಭಿಸಿದ ರಾಣ, ಸೈಕ್ಲಿಂಗ್ ಮೂಲಕವೇ ಮಧುಮೇಹ ನಿಯಂತ್ರಿಸಲು ಪ್ರಯತ್ನಿಸಿದರು. ಇದೀಗ ಸೈಕ್ಲಿಂಗ್ ಮಾಡುವುದರಿಂದ ಮಧುಮೇಹ ನಿಯಂತ್ರಣ ಸಾಧ್ಯವಿದೆ ಎಂಬುದನ್ನೂ ಅರಿತಿದ್ದಾರೆ.
ಸೈಕಲ್ ತುಳಿಯುವ ಮೂಲಕ ಆರೋಗ್ಯವಾಗಿರಿ (Keeping fit through cycle) ಎನ್ನುವ ಸಂದೇಶದೊಂದಿಗೆ ಸೆಪ್ಟೆಂಬರ್ 26ರಂದು ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಕೈಗೊಂಡಿದ್ದರು. ಒಟ್ಟು 4,500 ಕಿ.ಮೀ ಪ್ರಯಾಣದ ಗುರಿ ಹೊಂದಿದ್ದಾರೆ. ಇದೀಗ ಕಾಶ್ಮೀರದಿಂದ ಮಂಗಳೂರಿಗೆ ತಲುಪಿರುವ ಕಮಲೇಶ್ ರಾಣ ಈಗಾಗಲೇ 3,600 ಕಿ.ಮೀ ಪ್ರಯಾಣ ಪೂರೈಸಿದ್ದಾರೆ.
ಇವರು ಸೈಕಲ್ ಯಾತ್ರೆ ಶುರು ಮಾಡಿದ ದಿನವೇ ಶ್ರೀನಗರದಿಂದ ವಿಕಾಸ್ ಎಂಬ ಉತ್ತರಪ್ರದೇಶದ ಯುವಕ ಹವಾಮಾನ ಬದಲಾವಣೆ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್ ಯಾತ್ರೆ ಆರಂಭಿಸಿದ್ದರು. ಯಾತ್ರೆ ಆರಂಭಿಸಿ 30 ಕಿ.ಮೀ ದೂರದಲ್ಲಿ ಪರಸ್ಪರ ಭೇಟಿಯಾಗಿದ್ದರು. ಬಳಿಕ ಇಬ್ಬರೂ ಜೊತೆಗೂಡಿ ಸೈಕಲ್ನಲ್ಲಿ ಒಂದೇ ದಾರಿಯಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಮುಂಬೈತನಕವೂ ಒಟ್ಟಿಗೆ ಪ್ರಯಾಣಿಸಿದ್ದರು.
ಮಂಗಳೂರಿನಲ್ಲಿ ಅಪಘಾತ: ಮುಂಬೈನಿಂದ ವಿಕಾಸ್ ಅವರನ್ನು ಬಿಟ್ಟು ಒಬ್ಬರೇ ಪ್ರಯಾಣ ಬೆಳಸಿದ ಕಮಲೇಶ್ ರಾಣಾರಿಗೆ ಮಂಗಳೂರಿನಲ್ಲಿ ಅಪಘಾತವಾಗಿದೆ. ಡಿಸೆಂಬರ್ 20ರಂದು ಮಂಗಳೂರಿನ ಖಾಸಗಿ ಬಸ್ಸೊಂದು ಸೈಕಲ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಮಾಜಿ ಪತ್ರಕರ್ತ ನಂದಗೋಪಾಲ ಎಂಬುವವರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಪಘಾತದ ಸುದ್ದಿ ಕೇಳಿ ಮಧ್ಯಪ್ರದೇಶದ ಯುವಕ ವಿಕಾಸ್ ಭಟ್ಕಳದಿಂದ ಮಂಗಳೂರಿಗೆ ಪ್ರಯಾಣಿಸಿ ರಾಣ ಅವರನ್ನು ವಿಚಾರಿಸಲು ಸೈಕಲ್ನಲ್ಲಿ 200 ಕಿ.ಮೀ ಪ್ರಯಾಣಿಸಿದ್ದಾರೆ.