ಕರ್ನಾಟಕ

karnataka

ETV Bharat / state

ತೆಂಗಿನ ಕಾಯಿ ಕೀಳುವ ಕಾಯಕದಿಂದ ತಿಂಗಳಿಗೆ 60 ಸಾವಿರ ರೂ. ಗಳಿಸುತ್ತಾರೆ ಇವರು! - ತೆಂಗಿನ ಕಾಯಿ ಕೀಳುವ ಕಾಯಕ

ಐಟಿ-ಬಿಟಿ ಉದ್ಯೋಗಿಗಳು ತಿಂಗಳಿಗೆ 60 ಸಾವಿರ ರೂ. ಸಂಬಳ ಗಳಿಸೋದು ಸಾಮಾನ್ಯ. ಆದ್ರೆ ತೆಂಗಿನ ಮರ ಹತ್ತಿ ಕಾಯಿ ಕೀಳುವ ಕಾಯಕ ಮಾಡುವ ಇವರೂ ಕೂಡ ತಿಂಗಳಿಗೆ 60-80 ಸಾವಿರ ರೂ. ಗಳಿಸುತ್ತಾರೆಂದರೆ ನೀವು ನಂಬಲೇಬೇಕು.

60,000 earning per month from the coconut nut extractor
ತೆಂಗಿನ ಕಾಯಿ ಕೀಳುವ ಕಾಯಕದಿಂದ ತಿಂಗಳಿಗೆ 60 ಸಾವಿರ ರೂ. ಗಳಿಸುತ್ತಾರೆ ಇವರು..!

By

Published : Sep 12, 2020, 11:11 AM IST

ಮಂಗಳೂರು: ಐಟಿ-ಬಿಟಿ ಉದ್ಯೋಗಿಗಳು ತಿಂಗಳಿಗೆ 60 ಸಾವಿರ ರೂ. ಸಂಬಳ ಗಳಿಸೋದು ಸಾಮಾನ್ಯ. ಆದ್ರೆ, ತೆಂಗಿನ ಮರ ಹತ್ತಿ ಕಾಯಿ ಕೀಳುವ ಕಾಯಕ ಮಾಡುವ ಇವರೂ ಕೂಡ ತಿಂಗಳಿಗೆ 60-80 ಸಾವಿರ ರೂ. ಗಳಿಸುತ್ತಾರೆಂದರೆ ನೀವು ನಂಬಲೇಬೇಕು. ಹೌದು, ಸುಳ್ಯ ತಾಲೂಕಿನ ಮುರುಳ್ಯದ ಕಡೀರ ಗ್ರಾಮದ ವಿಠ್ಠಲ ಗೌಡ ಹಾಗೂ ಮಂಗಳೂರಿನ ಹೊರವಲಯದ ಸುರತ್ಕಲ್ ನಿವಾಸಿ ಅನುಷ್ ಎಂಬವರೇ ದಿನವೊಂದಕ್ಕೆ 60-80 ತೆಂಗಿನ ಮರಗಳನ್ನೇರಿ ಕಾಯಿ ಕೀಳುವ ಮೂಲಕ‌ ದಿನವೊಂದಕ್ಕೆ 2,000-2,500 ರೂ. ಗಳಿಸಿ ಜೀವನ ಸಾಗಿಸುತ್ತಾರೆ. ‌

ಓರ್ವನು ದಿನಕ್ಕೆ ಅಷ್ಟೊಂದು ಮರವೇರಲು ಸಾಧ್ಯವೇ ಎಂದು ಎನಿಸಬಹುದು. ಆಶ್ಚರ್ಯವೂ ಆಗಬಹುದು. ಇವರು ಸಾಂಪ್ರದಾಯಿಕ ಶೈಲಿಗಿಂತ ಹೊರತಾಗಿ ತೆಂಗಿನ ಮರವೇರುವ ಸಾಧನವೊಂದರ ಸಹಾಯದಿಂದ ಮರ ಹತ್ತುತ್ತಾರೆ. ಈ ಮೂಲಕ ಹೆಚ್ಚಿನ ಪರಿಶ್ರಮವಿಲ್ಲದೆ ಬೆಳಗ್ಗಿನಿಂದ ಸಂಜೆಯವರೆಗೆ 60-80 ಮರಗಳನ್ನೇರಿ ಕಾಯಿ ಕೀಳುತ್ತಾರೆ.

ಬದುಕು ಬದಲಿಸಿತು ತೆಂಗಿನ ಮರವೇರುವ ತರಬೇತಿ ಕಾರ್ಯಾಗಾರ:ಹಿಂದೆ‌ ಕೈ ಹಾಗೂ ಕಾಲಿಗೆ ಹಗ್ಗವನ್ನು ಬಳಸಿ ಸಾಂಪ್ರದಾಯಿಕ ಶೈಲಿಯಲ್ಲಿ ಕಾಯಿ ಕೇಳುತ್ತಿದ್ದರು. ಇದು ಬಹಳ ಪರಿಶ್ರಮದಾಯಕವಾಗಿದ್ದು, ಹೆಚ್ಚು ಮರ ಹತ್ತಲು ಸಾಧ್ಯವಾಗುತ್ತಿರಲಿಲ್ಲ. ಇದೇ ಸಮಯದಲ್ಲಿ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ) ಆಯೋಜಿಸಿದ್ದ ತೆಂಗು ಮರವೇರುವ ತರಬೇತಿಗೆ ಈ ಇಬ್ಬರೂ ಹಾಜರಾಗಿದ್ದರು. ಈ ತರಬೇತಿ ಕಾರ್ಯಾಗಾರ ಅವರ ಇಡೀ ಜೀವನ ಶೈಲಿಯನ್ನೇ ಬದಲಾಯಿಸಿತು. ಈ 'ತೆಂಗಿನ ಮರ ಸ್ನೇಹಿ' ಹೆಸರಿನ ತರಬೇತಿ ಕಾರ್ಯಾಗಾರ ಆರು ದಿನಗಳ ಕಾಲ ನಡೆಯುತ್ತಿದ್ದು, 150 ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಆದರೆ ತರಬೇತಿಯಲ್ಲಿ ಭಾಗವಹಿಸುವವರು‌ ಕನಿಷ್ಠ 7ನೇ ತರಗತಿ ತೇರ್ಗಡೆಯಾಗಿರಬೇಕು. 35 ವರ್ಷ ದಾಟಿರಬಾರದು ಎಂಬ ನಿಯಮವಿತ್ತು. ಆದರೆ ತರಬೇತಿ ಕಾರ್ಯಾಗಾರಕ್ಕೆ ಅರ್ಜಿ ಹಾಕಿರುವ ವಿಠ್ಠಲ ಗೌಡರ ಆಗಿನ ವಯಸ್ಸು 45 ಆಗಿತ್ತು. ಹಾಗಾಗಿ ಅವರಿಗೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಗಿಸಲು ಸಾಧ್ಯವಾಗಲಿಲ್ಲ. ‌ಆದರೆ ಪಟ್ಟು ಬಿಡದ ವಿಠ್ಠಲ ಗೌಡರು 'ತಾನು ಕೃಷಿಕ, ತನಗೆ ದುಡಿಯಲು ಉತ್ಸಾಹವಿದೆ. ಇಲ್ಲಿ ತರಬೇತಿ ಪಡೆದಲ್ಲಿ ತನಗೆ ಸ್ವಾವಲಂಬಿಯಾಗಿ ಜೀವನ ನಡೆಸಲು ಅನುಕೂಲವಾಗುತ್ತದೆ' ಎಂದು ವಿನಂತಿಸಿಕೊಂಡಿದ್ದರು. ಬಳಿಕ ಕೆವಿಕೆ ವಿಠ್ಠಲ ಗೌಡರನ್ನು 'ವಿಶೇಷ ಅಭ್ಯರ್ಥಿ' ಎಂದು ಆಯ್ಕೆ ಮಾಡಿತು.‌ ಕಾರ್ಯಾಗಾರದಲ್ಲಿ 25-30 ಮಂದಿಗೆ ತರಬೇತಿ ನೀಡಲಾಗುತ್ತದೆ. ಸಾಧನವನ್ನು ಜೋಡಿಸುವ ಕಲಿಕೆಯಿಂದ ಮರವೇರುವ ಕೆಲಸದವೆರೆಗೆ ತರಬೇತಿ ನೀಡಲಾಗುತ್ತದೆ. ಇಬ್ಬರೂ ಮೊದಲೇ ತೆಂಗಿನಮರ ಏರುವ ಅಭ್ಯಾಸ ಇರುವುದರಿಂದ ಈ ಸಾಧನ ಬಳಸಿ ಮರವೇರುವ ಕಾಯಕ ಸುಲಲಿತವಾಯಿತು. ಕಾರ್ಯಾಗಾರದ ಕೊನೆಗೆ ಲಿಖಿತ ಹಾಗೂ ಪ್ರ್ಯಾಕ್ಟಿಕಲ್ ಪರೀಕ್ಷೆ ಬರೆದು ಇಬ್ಬರೂ ತೇರ್ಗಡೆ ಹೊಂದಿದರು. ಆ ಬಳಿಕ ಇಬ್ಬರ ಭವಿಷ್ಯವೇ ಬದಲಾಯಿತು.

ಉತ್ತಮ ಬದುಕು ರೂಪಿಸಿತು ಈ ಕಾಯಕ

‌ಇದೀಗ ಇಬ್ಬರನ್ನೂ ಕಾಯಂ ತೆಂಗಿನ ತೋಟದ ಮಾಲೀಕರು ಕಾಯಿ ಕೀಳಲು ಕರೆಯುತ್ತಿದ್ದಾರಂತೆ. ಅಬ್ಬಬ್ಬಾ ಅಂದ್ರೂ 100-125 ಮಂದಿ ತೆಂಗು ತೋಟದ ಮಾಲೀಕರು ಇಬ್ಬರನ್ನೂ ಮೂರು ತಿಂಗಳಿಗೊಮ್ಮೆ ಕರೆ ಮಾಡಿ ಕಾಯಿ ಕೀಳಿಸುತ್ತಾರೆ. ಇವರು ತೆಂಗಿನ ಮರವೊಂದನ್ನು ಹತ್ತಲು 30-35 ರೂ. ಪಡೆದು ಪ್ರತೀ ದಿನವೂ 60-80 ಮರವೇರುತ್ತಾರೆ.

ಕೆವಿಕೆ ಕೃಷಿ ವಿಜ್ಞಾನಿ ಹಾಗೂ ಮುಖ್ಯಸ್ಥ ಟಿ.ಜೆ.ರಮೇಶ್ ಮಾತನಾಡಿ, ಕೆವಿಕೆಯಲ್ಲಿ ಇನ್ನೂರಕ್ಕೂ ಅಧಿಕ ಯುವಕರು ತೆಂಗಿನ ಮರವೇರಲು ತರಬೇತಿ ಪಡೆದಿದ್ದಾರೆ. ತೆಂಗಿನಕಾಯಿ ಕೀಳಲು ನುರಿತ ಯುವಕರ ಕೊರತೆಯಿಂದ ಕೆವಿಕೆ ಈ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿತ್ತು‌. ಇದರ ಜೊತೆಗೆ ನಿರುದ್ಯೋಗಿ ಯುವಕರಿಗೆ ಕೆಲಸವೂ ದೊರಕಿದಂತಾಗುತ್ತದೆ. ಈ ಮೂಲಕ ಅನುಷ್ ಹಾಗೂ ವಿಠ್ಠಲ ಗೌಡ ಸೇರಿದಂತೆ ಐದಾರು ಮಂದಿ ಯುವಕರು ಇದನ್ನು ಉದ್ದಿಮೆಯಾಗಿ ಪರಿವರ್ತಿಸಿ, ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ‌. ಈ ಮೂಲಕ ಇವರೆಲ್ಲರೂ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆಂದು ತಿಳಿಸಿದರು.

ತೋಟಗಾರಿಕಾ ವಿಜ್ಞಾನಿ ಡಾ. ರಶ್ಮಿ ಮಾತನಾಡಿ, ತೆಂಗು ಅಭಿವೃದ್ಧಿ ಮಂಡಳಿ ಪ್ರಾಯೋಜಿಸಿರುವ ತೆಂಗು ಸ್ನೇಹಿ ತರಬೇತಿ ಕಾರ್ಯಾಗಾರವನ್ನು 2013-16ರವರೆಗೆ ಆಯೋಜಿಸಿದ್ದರು‌. ಸುಮಾರು 200ಕ್ಕೂ ಅಧಿಕ ಮಂದಿ ಈ ತರಬೇತಿಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಮಹಿಳೆಯರೂ ಇದ್ದರು ಎನ್ನುವುದು ವಿಶೇಷ. ಈ ಕಾರ್ಯಾಗಾರದಲ್ಲಿ ತೆಂಗು ಬೆಳೆಸುವ ಬಗ್ಗೆ, ರೋಗಗಳ ಹತೋಟಿ, ತೆಂಗಿನ ಮರವೇರಿದಾಗ ಅದರ ಕಳೆಗಳನ್ನು ಯಾವ ರೀತಿ ಶುಚಿಗೊಳಿಸುವುದು, ಕಾಯಿ ಕೀಳುವ ಬಗ್ಗೆ ಐದು ದಿನಗಳ ತರಬೇತಿ ನಡೆಸಲಾಗಿತ್ತು. ಈಗಾಗಲೇ ಇಲ್ಲಿ ತರಬೇತಿ ಪಡೆದ ಹಲವಾರು ಮಂದಿ‌ ಸ್ವಾವಲಂಬಿ ಜೀವನ ನಡೆಸುತ್ತಿದ್ದು, ಇವರು ಇನ್ನಷ್ಟು ಮಂದಿಗೆ ತರಬೇತಿ ನೀಡಿ ಉದ್ಯೋಗಾವಕಾಶ ದೊರೆತಿದೆ.

ತೆಂಗು ಮರವೇರುವ ವಿಠ್ಠಲ ಗೌಡ ಮಾತನಾಡಿ, ತರಬೇತಿ ಪಡೆದ ಆರಂಭದಲ್ಲಿ 50-60 ಮರವೇರುತ್ತಿದ್ದೆ. ಈಗ ದಿನವೊಂದಕ್ಕೆ 80 ಮರವೇರುತ್ತಿದ್ದೇನೆ. ಈಗ ಒಂದು ತೆಂಗಿನ ಮರವೇರಲು 35 ರೂ. ಪಡೆಯುತ್ತೇನೆ. ನಾನು ನನ್ನ ಊರಿನ ಸುತ್ತಮುತ್ತಲಿನ ಸುಮಾರು 20 ಕಿ.ಮೀ. ವ್ಯಾಪ್ತಿಯ ತೋಟಗಳಿಂದ ಕಾಯಿ ಕೀಳುತ್ತಿದ್ದೇನೆ. ಈಗಲೂ ತೆಂಗಿನಕಾಯಿ ಕೀಳುವವರ ಕೊರತೆಯಿದ್ದು, ಯುವಕರು ಇಂತಹ ಕೆಲಸಗಳಲ್ಲಿ ಗುರುತಿಸಿಕೊಂಡರೆ ಒಳ್ಳೆಯ ಸಂಬಳ ಪಡೆದು ಜೀವನ ಸುಗಮವಾಗಿ ನಡೆಸಲು ಸಾಧ್ಯ ಎಂದು ಹೇಳಿದರು.

ಕಾಯಿ ಕೀಳುವ ಅನುಷ್ ಮಾತನಾಡಿ, ಈಗಾಗಲೇ ನಾನು 20-25 ತೋಟಗಳಲ್ಲಿ ಕಾಯಂ ಕಾಯಿ ‌ಕೀಳುತ್ತಿದ್ದು, ಅದರ ಜೊತೆಗೆ ಅಗತ್ಯವಿದ್ದಲ್ಲಿ ಇನ್ನಷ್ಟು ಜನರನ್ನು ನಾನು ಕರೆದುಕೊಂಡು ಹೋಗುತ್ತಿದ್ದೇನೆ.‌ ಕೆವಿಕೆಯಲ್ಲಿ ತರಬೇತಿ ಪಡೆದ ಬಳಿಕ ನನ್ನ ಜೀವನಮಟ್ಟ ಬಹಳಷ್ಟು ಸುಧಾರಿಸಿದೆ.‌ ಕೆಲಸವಿಲ್ಲ ಎಂದು ಕೂರುತ್ತಿರುವ ಯುವಕರು ಈ ರೀತಿಯ ಉದ್ಯೋಗದಲ್ಲಿ ತೊಡಗಿಸಿಕೊಂಡಲ್ಲಿ ಅವರ ಜೀವನಮಟ್ಟ ಖಂಡಿತಾ ಸುಧಾರಿಸಲು ಸಾಧ್ಯ ಎಂದರು.

ABOUT THE AUTHOR

...view details