ಮಂಗಳೂರು:ಆರು ವರ್ಷದ ಬಾಲಕನೋರ್ವ ತನಗಾಗಿ ಪೋಷಕರು ನೀಡಿದ್ದ ಪಾಕೆಟ್ ಮನಿಯನ್ನೇ ಕೂಡಿಟ್ಟು ಆಯೋದ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿರುವ ಅಪರೂಪದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ಕುದ್ರೋಳಿ ವಿಶಾಲ್ ನರ್ಸಿಂಗ್ ಹೋಮ್ ಬಳಿಯ ನಿವಾಸಿಯಾಗಿರುವ ಒಂದನೇ ತರಗತಿ ವಿದ್ಯಾರ್ಥಿ ಅರ್ನವ್ ಪ್ರಭು ದೇಣಿಗೆ ನೀಡಿರುವ ಬಾಲಕ.
ಆರ್ನವ್, ನರೇಂದ್ರ ಮೋದಿಯವರ ಭಾಷಣದಿಂದ ಉತ್ತೇಜಿತನಾಗಿ ಕಳೆದ ಆರು ತಿಂಗಳಿನಿಂದ ಪೋಷಕರು ನೀಡುತ್ತಿದ್ದ ಪಾಕೆಟ್ ಮನಿಯನ್ನು ಖರ್ಚು ಮಾಡದೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಲು ಒಟ್ಟು ಮಾಡುತ್ತಿದ್ದ. ನಿನ್ನೆ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯಕರ್ತರು ದೇಣಿಗೆ ಸಂಗ್ರಹಕ್ಕಾಗಿ ಅರ್ನವ್ ಪ್ರಭು ಮನೆಗೆ ಹೋಗಿದ್ದಾರೆ.
ಈ ಸಂದರ್ಭದಲ್ಲಿ ಆತನ ಪೋಷಕರು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪಾಕೆಟ್ ಮನಿಯನ್ನು ಸಂಗ್ರಹ ಮಾಡಿರುವ ಬಗ್ಗೆ ತಿಳಿಸಿದ್ದಾರೆ. ನಂತರ ಕೂಡಿಟ್ಟಿದ್ದ ಡಬ್ಬವನ್ನು ಒಡೆದಿದ್ದು, ಅದರಲ್ಲಿದ್ದ 610 ರೂಗಳನ್ನು ಅರ್ನವ್ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾನೆ. ಬಾಲಕನ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನು ಓದಿ:ಅಶ್ಲೀಲ ವಿಡಿಯೋ ವೀಕ್ಷಣೆ ಪರಿಣಾಮ: ಪರಿಷತ್ನಲ್ಲಿ ಎಮ್ಎಲ್ಸಿಗಳ ಮೊಬೈಲ್ ಬಳಕೆಗೆ ನಿರ್ಬಂಧ..!