ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2020-21 ರೊಂದರಲ್ಲೇ 18 ವರ್ಷದೊಳಗಿನ 567 ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೆ ಎಂದು ದ.ಕ.ಜಿಲ್ಲಾ ಪಂಚಾಯತ್ ಹಾಗೂ ಮಂಗಳೂರು ಮಹಾನಗರ ಪಾಲಿಕೆ ನಡೆಸಿರುವ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
2019-20ರಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ನಡೆಸಿರುವ ಸಮೀಕ್ಷೆಯಲ್ಲಿ ಶಾಲೆಯಿಂದ 40 ಮಕ್ಕಳು ಹೊರಗುಳಿದಿದ್ದರು. ಈ ಬಾರಿ ಶಾಲೆಯಿಂದ ಹೊರಗುಳಿದಿರುವ 567 ವಿದ್ಯಾರ್ಥಿಗಳಲ್ಲಿ 157 ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದು, ಉಳಿದ 410 ವಿದ್ಯಾರ್ಥಿಗಳನ್ನು ಮತ್ತೆ ಶಾಲೆಯತ್ತ ಕರೆತರುವ ಕಾರ್ಯ ನಡೆಯುತ್ತಿದೆ.
ಈ ಕುರಿತಾಗಿ ಸಮಗ್ರ ಶಿಕ್ಷಣ ಕರ್ನಾಟಕ ದ.ಕ.ಜಿಲ್ಲಾ ಉಪ ಯೋಜನಾ ಸಂಯೋಜಕಿ ಮಂಜುಳಾ ಕೆ.ಎಲ್. ಪ್ರತಿಕ್ರಿಯಿಸಿ, ಹಲವಾರು ತಿಂಗಳ ಅವಧಿಯ ಸಮೀಕ್ಷೆಯಲ್ಲಿ, 6 ರಿಂದ 14 ವರ್ಷ ವಯಸ್ಸಿನವರಲ್ಲಿ ಹೆಚ್ಚು ಮಂದಿ ಶಾಲೆಗಳಿಂದ ಹೊರಗುಳಿದಿಲ್ಲ. ಆದರೆ 15-16 ವರ್ಷ ವಯಸ್ಸಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆ ತೊರೆದಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಅಲ್ಲದೆ, ಶಾಲೆಗಳು ದೀರ್ಘ ಕಾಲದವರೆಗೆ ಮುಚ್ಚಿರುವುದರಿಂದ, ವಲಸೆ ಕಾರ್ಮಿಕರು ಮತ್ತೆ ತಮ್ಮ ಊರಿನತ್ತ ಮುಖ ಮಾಡಿರುವುದಿಂದ ಈ ಮಕ್ಕಳು ಶಿಕ್ಷಣ ಮೊಟಕುಗೊಳಿಸಲು ಮುಖ್ಯ ಕಾರಣ ಎಂದು ಹೇಳಿದರು.
ದ.ಕ.ಜಿಲ್ಲೆಯಲ್ಲಿದ್ದ ಉತ್ತರ ಕರ್ನಾಟಕ ಭಾಗದ ಎಸ್‌ಎಸ್‌ಎಲ್‌ಸಿ ಮತ್ತು ಕೆಳ ತರಗತಿಯ ಹಲವಾರು ವಿದ್ಯಾರ್ಥಿಗಳು ಮತ್ತೆ ತಮ್ಮ ಊರುಗಳಿಗೆ ತೆರಳಿದ್ದು, ತಮ್ಮ ಊರುಗಳಲ್ಲಿರುವ ಶಾಲೆಗಳಿಗೆ ದಾಖಲಾಗಿದ್ದಾರೆ. ಆದರೆ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ಸಿಸ್ಟಂನಲ್ಲಿ (ಎಸ್‌ಎಟಿಎಸ್) ಅವರು ದ.ಕ.ಜಿಲ್ಲೆಯಲ್ಲಿಯೇ ದಾಖಲಾಗಿದ್ದಾರೆ ಎಂದು ತೋರಿಸುತ್ತದೆ.
ನಾವು ಅಂತಹ ನಕಲುಗಳನ್ನು ವಿಂಗಡಿಸಿದ್ದೇವೆ. ಜೊತೆಗೆ ಶಾಲೆ ತೊರೆದವರನ್ನು ಮತ್ತೆ ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ನಾವು ಕಾರ್ಮಿಕ ಇಲಾಖೆಗೆ ಸಮೀಕ್ಷೆಯ ವಿವರಗಳನ್ನು ಹಂಚಿಕೊಂಡಿದ್ದೇವೆ. ಅಲ್ಲದೆ ಬಲವಂತವಾಗಿ ಬಾಲಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡಿರುವವರನ್ನು ಪತ್ತೆ ಹಚ್ಚಿ ಶಾಲೆಗೆ ಸೇರುವಂತೆ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ ಎಂದು ಮಂಜುಳಾ ಕೆ.ಎಲ್. ಹೇಳಿದರು.
ಇದನ್ನೂ ಓದಿ: ಬಿಇ ಮಾಡಿದವ ಕೆಲಸಕ್ಕೆ ಸೇರಿದ್ರೆ ವರ್ಷಕ್ಕೆ 3 ಲಕ್ಷ ರೂ.. ಆದ್ರೆ, ರೈತನಾದ್ರೆ 30 ಲಕ್ಷ ರೂ. ಗಳಿಕೆ ಸಾಧ್ಯ..