ಬೆಳ್ತಂಗಡಿ: ಸಾಮಾನ್ಯವಾಗಿ ಇಂದಿನ ಜಗತ್ತಿನಲ್ಲಿ ವೃದ್ಧರನ್ನು, ಅಸಹಾಯಕರನ್ನು ಕಡೆಗಣಿಸುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ. ಅನಾಥರ ಅಥವಾ ಅಸಹಾಯಕರ ಕಣ್ಣೀರು ಅಥವಾ ವೇದನೆ ಶಾಪವಾಗಿ ಬದಲಾದರೂ ಅಚ್ಚರಿ ಪಡಬೇಕಿಲ್ಲ. ವಿದ್ಯಾವಂತರು ಓದಿ ಪಟ್ಟಣ ಸೇರಿಕೊಂಡಿದ್ದಾರೆ. ಆದರೆ, ಹಿರಿಯರು ಹಳ್ಳಿಗಳಲ್ಲೇ ತಮಗೆ ಯಾರೂ ಇಲ್ಲ ಎಂದು ಕೊರಗುವಂತಾಗಿದೆ. ಈ ಮನಃಸ್ಥಿತಿ ಬದಲಾಗಬೇಕು. ಹಿರಿಯರು ಯಾವುದೇ ಕಾರಣಕ್ಕೂ ನಮ್ಮನ್ನು ಕಿರಿಯರು ಕಡೆಗಣಿಸುತ್ತಿದ್ದಾರೆ ಎಂದು ಕಣ್ಣೀರು ಹಾಕುವಂತಾಗಬಾರದು. ಹೀಗೆ ಮಾಡಿದ್ದಲ್ಲಿ ಒಂದು ದಿನ ತನ್ನನ್ನು ತಾನು ಅನಾಥನನ್ನಾಗಿ ಮಾಡಿಕೊಳ್ಳುವ ದಿನ ಬರಬಹುದು. ಆದ್ದರಿಂದ ಹಿರಿಯರನ್ನು ಗೌರವಿಸುವ ಪರಿಪಾಠ ಸಮಾಜದಲ್ಲಿ ಬೆಳೆಯಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಕಲ್ಪನೆಯಂತೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಲಕ ಸಮಾಜದಲ್ಲಿರುವ ಬಡವರಿಗೆ, ನೊಂದವರಿಗೆ, ವಿಶೇಷ ಚೇತನರಿಗೆ ನೆರವು ನೀಡುವ ಕಾರ್ಯಕ್ರಮ 'ವಾತ್ಸಲ್ಯ ಯೋಜನೆ' ಕಾರ್ಯಕ್ರಮಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು.
ವಾತ್ಸಲ್ಯ ಯೋಜನೆಗೆ ಚಾಲನೆ ನೀಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾಗಿದ್ದೇ ಬಡವರು, ಅನಕ್ಷರಸ್ಥರು, ಹಿಂದುಳಿದವರು ಅಭಿವೃದ್ಧಿ ಹೊಂದಬೇಕು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ. ಈ ಯೋಜನೆಯ ಮೂಲಕ ಬದುಕಿಗೆ ಮಾರ್ಗದರ್ಶನ ನೀಡುವ, ಸ್ವಾಭಿಮಾನದ ವಿಶೇಷತೆಯನ್ನು ತಿಳಿಸುವ ಕಾರ್ಯ ಮಾಡಲಾಗಿದೆ. ಒಂದರ್ಥದಲ್ಲಿ ನನಗೆ ನಾನೇ ಸಹಾಯ ಮಾಡಬೇಕು ಎಂಬ ಕಲ್ಪನೆ ಇದಾಗಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ವಾತ್ಸಲ್ಯ ಯೋಜನೆ ರೂಪಿಸಲಾಗಿದೆ. ಜನಜಾಗೃತಿ ವೇದಿಕೆಯವರು ಹಳ್ಳಿ ಹಳ್ಳಿಗಳಲ್ಲಿ ಸರ್ವೆ ಕಾರ್ಯ ನಡೆಸಿ ಫಲಾನುಭವಿಗಳ ಪಟ್ಟಿ ತಯಾರಿಸಿದ್ದಾರೆ. ‘ವಾತ್ಸಲ್ಯ’ ಫಲಾನುಭವಿಗಳಿಗೆ ಶಿಸ್ತುಬದ್ಧವಾಗಿ ಯೋಜನೆ ಮೂಲಕ ಬೇಕಾದ ವಸ್ತುಗಳನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಅಸಹಾಯಕರಿಗೆ ಅವರ ಅಕ್ಕಪಕ್ಕದಲ್ಲಿರುವವರು ಸಹಾಯ ಮಾಡಬೇಕು. ವೃದ್ಧರಿಗೆ, ಸಮಾಜದಲ್ಲಿ ಕಡೆಗಣಸಲ್ಪಟ್ಟವರಿಗೆ ಈ ಸಹಾಯ ಮಾಡಲಾಗುತ್ತಿದ್ದು, ಅವರು ಬದುಕಿದ್ದಷ್ಟು ದಿನ ನೆಮ್ಮದಿಯಿಂದ ಜೀವನ ನಡೆಸುವಂತಾಗಬೇಕಿದೆ. ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ವಾತ್ಸಲ್ಯ ಕಿಟ್ ವಿತರಿಸಲಾಗುತ್ತಿದೆ. ಅದೇ ರೀತಿ ಮುಂದೆ 10 ಸಾವಿರ ಮಂದಿಗೆ ಮನೆ, ಆರೋಗ್ಯ ಮೊದಲಾದ ವಿಚಾರಗಳಿಗೆ ಸ್ಪಂದಿಸುವ ಪ್ರಯತ್ನ ನಡೆಸಲಾಗುವುದು ಎಂದರು.
ಕಷ್ಟದಲ್ಲಿರುವವರಿಗೆ ಸ್ಪಂದಿಸುವುದು ಮಾನವೀಯ ಧರ್ಮ :
ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಕಷ್ಟದಲ್ಲಿರುವವರ ಬಗ್ಗೆ ಕಾಳಜಿ ವಹಿಸುವ ಚಿಂತನೆ ನಡೆಸಿದಲ್ಲಿ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ವಾತ್ಸಲ್ಯ ಫಲಾನುಭವಿಗಳನ್ನು ಗುರುತಿಸುವ ಸಂದರ್ಭದಲ್ಲೂ ಸುಮಾರು 4 ಸಾವಿರ ಜನರನ್ನು, ನೆರೆಹೊರೆಯವರು ಸಲಹುತ್ತಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಜೊತೆಯಾಗುತ್ತಿದ್ದಾರೆ ಎಂಬ ವಿಚಾರ ತಿಳಿಯಿತು. ಈ ರೀತಿ ಕಷ್ಟದಲ್ಲಿದ್ದವರಿಗೆ ಸ್ಪಂದಿಸುತ್ತಿರುವುದು ಹಾಗೂ ಬಡವರಿಗೆ ಜನಸಮಾನ್ಯರು ಸ್ಪಂದಿಸುವ ಸಹಾಯ ಮಾಡುವ ಮನೋಭಾವ ಭಾರತದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಬಡವರನ್ನು ಮೇಲೆತ್ತುವುದು ಮಾನವೀಯ ಧರ್ಮವೂ ಆಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಫಲಾನುಭವಿಗಳನ್ನು ಗುರುತಿಸಿ ಮಾಸಾಶನ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗ್ರಾಮಾಭಿವೃದ್ಧಿ ಯೋಜನೆ ಆರಂಭವಾದ ದಿನದಿಂದ ಇಲ್ಲಿಯವರೆಗೆ ಬಡವರಿಗೆ ಸ್ಪಂದಿಸುವ ಕೆಲಸ ನಿರ್ವಹಿಸುತ್ತಿದೆ. ಈ ಹಿಂದೆ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ವಸ್ತುಗಳನ್ನು ತಲುಪಿಸಿದ್ದು ನೆನಪಾಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆ ಬಡ ಜನರ ಪರವಾಗಿ ಕೆಲಸ ಮಾಡುತ್ತಿದೆ. ಇದರಿಂದ ಜನತೆ ಸ್ವಾವಲಂಬಿ ಜೀವನ ನಡೆಸಲು ಸಹಾಯ ಮಾಡಿದಂತಾಗುತ್ತದೆ. ಈ ಬಾರಿ ಡಾ. ಹೆಗ್ಗಡೆಯವರ ಹುಟ್ಟುಹಬ್ಬದ ಸಂದರ್ಭ ವಾತ್ಸಲ್ಯ ಯೋಜನೆ ಜಾರಿಗೊಳಿಸುವ ಸತ್ಕಾರ್ಯ ಹಮ್ಮಿಕೊಳ್ಳಲಾಗಿದೆ. ಇದು ಒಂದರ್ಥದಲ್ಲಿ ಕಷ್ಟದಲ್ಲಿದ್ದವರ ಬದುಕನ್ನು ಹಗುರ ಮಾಡುವ ಕೆಲಸ ಮಾಡಿದ್ದೇವೆ. ಈ ಯೋಜನೆ ಜಾರಿಗೊಳಿಸುವುದು ನಿಜಕ್ಕೂ ಸವಾಲಿನ ಕೆಲಸವಾಗಿದ್ದು, ಎಲ್ಲರ ಶ್ರಮದಿಂದ ಅಚ್ಚಕಟ್ಟಾಗಿ ನಡೆದಿದೆ ಎಂದರು.
ಏಕಕಾಲದಲ್ಲಿ 7,300 ಕಿಟ್ ವಿತರಣೆ:
ರಾಜ್ಯದಲ್ಲಿ 10,461 ಮಂದಿಗೆ ವರ್ಷಕ್ಕೆ 8 ಕೋಟಿ ರೂ. ಮಾಸಾಶನ ವಿತರಣೆ ಮಾಡಲಾಗುತ್ತಿದೆ. ಬುಧವಾರ ಒಂದು ಕೋಟಿ ರೂ. ವೆಚ್ಚದಲ್ಲಿ ರಾಜ್ಯದೆಲ್ಲೆಡೆ ಏಕ ಕಾಲದಲ್ಲಿ 7,300 ಕಿಟ್ ವಿತರಣೆ ಮಾಡಲಾಗಿದೆ. ಅಡುಗೆ ಪಾತ್ರೆಗಳು, ಚಾಪೆ, ಹೊದಿಕೆ ಮೊದಲಾದ ಮೂಲಭೂತ ಅವಶ್ಯಕ ವಸ್ತುಗಳನ್ನು ಕಿಟ್‌ನಲ್ಲಿ ಮನೆ ಬಾಗಿಲಿಗೆ ಒದಗಿಸಲಾಗುತ್ತದೆ. ಸ್ವಾವಲಂಬಿ ಹಾಗೂ ಸ್ವಾಭಿಮಾನಿಗಳಾಗಿ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸಬೇಕು ಎಂಬ ಉದ್ದೇಶ ಈ ಯೋಜನೆಯದ್ದಾಗಿದೆ. ವಾತ್ಸಲ್ಯ ಕಿಟ್ ಸಾಗಿಸುವ ಟ್ರಕ್‌ಗಳಿಗೆ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿ ದೇಗುಲ ಮುಂಭಾಗ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಎಸ್.ಡಿ.ಎಂ, ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ. ಬಿ. ಯಶೋವರ್ಮ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ವಿ.ರಾಮಸ್ವಾಮಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.