ಮಂಗಳೂರು: ಕೋವಿಡ್ ಸೋಂಕಿನ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬೆಂಗಳೂರಿಗಿಂತ ದ.ಕ. ಜಿಲ್ಲೆಯಲ್ಲೇ ಸೋಂಕಿತರ ಸಂಖ್ಯೆ ಅಧಿಕವಿದೆ. ಮೃತರ ಸಂಖ್ಯೆಯಲ್ಲಿಯೂ ಕೂಡ ಹೆಚ್ಚಳವಾಗಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 422 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಐವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಶೇ.1.09 ಪಾಸಿಟಿವಿಟಿ ದರವಿದ್ದರೆ(ಸೋಂಕು ತಗಲುವ ಪ್ರಮಾಣ), ಜಿಲ್ಲೆಯಲ್ಲಿ ಶೇ. 3.85 ದಾಖಲಾಗಿದೆ. ನಿನ್ನೆ ಒಟ್ಟು 270 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಬೆಂಗಳೂರು ನಗರದಲ್ಲಿ ಕಳೆದ 24 ಗಂಟೆಯಲ್ಲಿ 348 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ.
ಕಳೆದ ಒಂದು ವಾರದಿಂದ ದ.ಕ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಪ್ರತಿದಿನ 300-400 ಕ್ಕಿಂತಲೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.
ಆಗಸ್ಟ್ 8 ರಂದು ಬೆಂಗಳೂರು ನಗರದಲ್ಲಿ 348 ಪ್ರಕರಣಗಳು ದಾಖಲಾದರೆ, ದ.ಕ.ದಲ್ಲಿ 438 ಪ್ರಕರಣಗಳು ದಾಖಲಾಗಿದ್ದವು. 6 ಜನರು ಮೃತಪಟ್ಟಿದ್ದಾರೆ. ಅದೇ ರೀತಿ, ಆಗಸ್ಟ್ 10 ರಂದು ಬೆಂಗಳೂರು ನಗರದಲ್ಲಿ 315 ಪ್ರಕರಣಗಳು ದಾಖಲಾದರೆ, ದ.ಕ.ದಲ್ಲಿ 378 ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 377 ಪ್ರಕರಣಗಳು ದಾಖಲಾದರೆ, ದ.ಕ. ಜಿಲ್ಲೆಯಲ್ಲಿ 422 ಪ್ರಕರಣಗಳು ದಾಖಲಾಗಿದೆ. ಎರಡೂ ಜಿಲ್ಲೆಯಲ್ಲಿ ತಲಾ ಐವರು ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿನ ಒಟ್ಟು 1,04,257 ಸೋಂಕಿತರ ಪೈಕಿ 99,296 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ವರೆಗೆ ಸೋಂಕಿನಿಂದ 1,482 ಮಂದಿ ಮೃತಪಟ್ಟಿದ್ದು, ಜಿಲ್ಲೆಯ ವಿವಿಧ ಆಸ್ಪತ್ರೆಗಳು ಹಾಗೂ ಮನೆಗಳಲ್ಲಿ 3,479 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರಳದಲ್ಲಿ ಕೋವಿಡ್ ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಸಹ ಕಳೆದೊಂದು ವಾರದಿಂದ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ.