ಮಂಗಳೂರು: ನಿವೃತ್ತ ಶಿಕ್ಷಕಿಯ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತೇನೆ ಎಂದು ನಂಬಿಸಿ ಬ್ಯಾಂಕ್ ಉದ್ಯೋಗಿ ಮಹಿಳೆಯೋರ್ವರು ಲಕ್ಷಾಂತರ ರೂ. ವಂಚನೆ ಮಾಡಿರುವ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ನಿವೃತ್ತ ಶಿಕ್ಷಕಿ ಥೆರೆಸಾ ಡಿಸೋಜ(80) ವಂಚನೆಗೊಳಗಾದ ವೃದ್ಧ ಮಹಿಳೆ. ನಗರದ ಮಿಲಾಗ್ರೀಸ್ ಕ್ರಾಸ್ ರಸ್ತೆಯಲ್ಲಿನ ಆಂಧ್ರ ಬ್ಯಾಂಕ್ ಕ್ಲರ್ಕ್ ಗ್ರೇಸ್ ಫರ್ನಾಂಡೀಸ್ ವಂಚನೆಗೈದ ಆರೋಪಿ.
ಥೆರೆಸಾ ಡಿಸೋಜ ಹಾಗೂ ಗ್ರೇಸ್ ಫರ್ನಾಂಡೀಸ್ ನೆರೆಹೊರೆಯವರಾಗಿದ್ದು, ಆತ್ಮೀಯರಾಗಿದ್ದರು. ಈ ಹಿನ್ನೆಲೆಯಲ್ಲಿ ನಿವೃತ್ತರಾದ ಥೆರೆಸಾ ಡಿಸೋಜ ಅವರು 2006-07 ಹಾಗೂ 2008-09 ರಲ್ಲಿ ತಮ್ಮ ಪಿಂಚಣಿ ಹಣವನ್ನು ಗ್ರೇಸ್ ಫರ್ನಾಂಡೀಸ್ ಅವರ ಕೆಲಸ ನಿರ್ವಹಿಸುತ್ತಿರುವ ಆಂಧ್ರ ಬ್ಯಾಂಕ್ ಶಾಖೆಯಲ್ಲಿ ಠೇವಣಿ ಇಡಲು ಬಯಸಿದ್ದರು. ಈ ಸಂದರ್ಭ ಗ್ರೇಸ್ ಫರ್ನಾಂಡೀಸ್ ಆಕೆಯ ಬ್ಯಾಂಕ್ ಖಾತೆಯನ್ನು ತಾನೇ ನಿರ್ವಹಿಸುವುದಾಗಿ ನಂಬಿಸಿದ್ದರು. ಆದರೆ ಗ್ರೇಸ್ ಫರ್ನಾಂಡೀಸ್ ಯಾವುದೇ ಹಣವನ್ನು ಥೆರೆಸಾ ಡಿಸೋಜ ಖಾತೆಗೆ ಹಾಕದೆ ವಂಚಿಸಿ ಆಕೆಗೆ ಕಂಪ್ಯೂಟರೀಕೃತ ಪಾಸ್ ಬುಕ್ ನೋಂದಣಿ ಮಾಡದೆ ಕೈಯಲ್ಲಿ ಬರೆದ ಪಾಸ್ ಬುಕ್ಅನ್ನು ನೀಡಿ ಬ್ಯಾಂಕ್ ಖಾತೆಗೆ ಹಣ ಹಾಕಿರುವುದಾಗಿ ತೋರಿಸುತ್ತಿದ್ದರು. ಅಲ್ಲದೆ ಎಫ್ ಡಿ ಇಡಬೇಕಾದ ಹಣಕ್ಕೆ ನಾಲ್ಕು ಎಫ್ಡಿ ರಶೀದಿಯನ್ನು ಬ್ಯಾಂಕ್‌ನಿಂದ ಕದ್ದು, ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ್ದರು.
ಹಣದ ಬಗ್ಗೆ ವಿಚಾರಿಸಿದ್ದಕ್ಕೆ ಜೀವ ಬೆದರಿಕೆ
ಈ ನಡುವೆ 2008 ರ ಡಿಸೆಂಬರ್ 12ರಂದು ಥೆರೆಸಾ ಡಿಸೋಜ ಬ್ಯಾಂಕ್ಗೆ ಹೋಗಿ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ 5,46,650 ರೂ. ಬದಲು ಬ್ಯಾಂಕ್ ಖಾತೆಯಲ್ಲಿ ಕೇವಲ 15,571 ರೂ. ಮಾತ್ರ ಇತ್ತು. ಆದರೆ ಇವರ ಗ್ರೇಸ್ ಡಿಸೋಜ ಕೈ ಬರಹದಲ್ಲಿದ್ದ 5,46,650 ರೂ. ಪಾಸ್ ಬುಕ್ನಲ್ಲಿ ಇತ್ತು. ತಕ್ಷಣ ಗ್ರೇಸ್ ಫರ್ನಾಂಡೀಸ್ ಮನೆಗೆ ತೆರಳಿ ವಿಚಾರಿಸಿದಾಗ ಗ್ರೇಸ್ ಮತ್ತು ಆಕೆಯ ಪತಿ ಜೀವಬೆದರಿಕೆ ಹಾಕಿದ್ದರು.
ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗ್ರೇಸ್ ಅವರನ್ನು ಉದ್ಯೋಗದಿಂದ ಅಮಾನತುಗೊಳಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿರುವ ಅಂದಿನ ಇನ್ ಸ್ಪೆಕ್ಟರ್ ಆಗಿದ್ದ ವಿನಯ್ ಗಾಂವ್ಕರ್ ತನಿಖೆ ನಡೆಸಿ 2011ರ ಮಾ.14ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು. ವಿಚಾರಣಾ ನ್ಯಾಯಾಲಯದ ತೀರ್ಪಿನ ಬಗ್ಗೆ ಅಸಮಾಧಾನಗೊಂಡ ಸರ್ಕಾರ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಗ್ರೇಸ್ ಡಿಸೋಜ ಅಪರಾಧಿ ಎಂದು ತೀರ್ಪು ನೀಡಿದೆ.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಅವರು ಬ್ಯಾಂಕ್‌ನಿಂದ ದಾಖಲೆಗಳನ್ನು ಕಳವು ಮಾಡಿದ ಅಪರಾಧಕ್ಕೆ 2 ವರ್ಷ ಸಜೆ, 2,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 2 ತಿಂಗಳು ಸಜೆ, ನಕಲಿ ದಾಖಲಿ ಸೃಷ್ಟಿಸಿರುವುದಕ್ಕೆ 1 ವರ್ಷ ಸಜೆ, 1 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ತಿಂಗಳು ಸಜೆ, ನಕಲಿ ದಾಖಲೆಯನ್ನು ಅಸಲಿ ಎಂದು ನಂಬಿಸಿ ಗ್ರಾಹಕರಿಗೆ ನಂಬಿಕೆ ದ್ರೋಹ, ವಂಚನೆ ಎಸಗಿರುವ ಅಪರಾಧಗಳಿಗೆ ತಲಾ 4 ವರ್ಷ ಸಜೆ, 3 ಸಾವಿರ ರೂ. ದಂಡ ಮತ್ತು ದಂಡ ಪಾವತಿಸಲು ವಿಫಲವಾದರೆ 2 ತಿಂಗಳು ಸಜೆ ವಿಧಿಸಿ ತೀರ್ಪು ನೀಡಿದೆ. ಜೊತೆಗೆ ತೆರೆಸಾ ಡಿಸೋಜಾ ಅವರಿಗೆ 10,000 ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ವಾದಿಸಿದ್ದಾರೆ.
ಇದನ್ನು ಓದಿ:ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ: ಡೆತ್‌ನೋಟ್ ಆಧರಿಸಿ ಎಸ್ಪಿ ತನಿಖೆ