ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 39ನೇ ಘಟಿಕೋತ್ಸವವು ವಿಶ್ವವಿದ್ಯಾನಿಲಯದ ಆವರಣದ ಮಂಗಳಾ ಸಭಾಂಗಣದಲ್ಲಿ ನಡೆಯಿತು. ಕೋವಿಡ್ ನಿಯಮಾವಳಿಯಂತೆ ನಡೆದ ಕಾರ್ಯಕ್ರಮದಲ್ಲಿ 117 ಪಿಎಚ್ಡಿ, 10 ಚಿನ್ನದ ಪದಕ ವಿಜೇತ ಮತ್ತು 69 ಪ್ರಥಮ ಶ್ರೇಣಿ ಪಡೆದವರಿಗೆ ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು ಹಾಗೂ ವಿವಿ ಉಪಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ ಅವರು ಪದವಿ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಇನ್ಪೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ ಸುಧಾಮೂರ್ತಿ, ಶೈಕ್ಷಣಿಕ ಜೀವನದಿಂದ ಹೊರಜಗತ್ತಿಗೆ ಪಾದಾರ್ಪಣೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು, ಶಿಕ್ಷಕರು ಇರುವುದಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಗಳಿಸಿದ ಜ್ಞಾನವನ್ನು ಬಳಸಿ ಮುನ್ನುಗ್ಗಬೇಕು. ಯಶಸ್ಸಿಗೆ ಅಡ್ಡ ದಾರಿ ಬಳಸದೆ ಕಠಿಣ ಪರಿಶ್ರಮ ಪಡಬೇಕು. ಸವಾಲುಗಳನ್ನು ಎದುರಿಸಿ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 2019-20ನೇ ಸಾಲಿನಲ್ಲಿ 33,806 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ 117 ಪಿಹೆಚ್ಡಿ, 6,657 ಸ್ನಾತಕೋತ್ತರ ಪದವಿ, 36,940 ಪದವಿ, 29 ಸ್ನಾತಕೋತ್ತರ ಡಿಪ್ಲೊಮಾ ವಿದ್ಯಾರ್ಥಿಗಳಿದ್ದಾರೆ. 117 ಪಿಹೆಚ್ಡಿ, 10 ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು ಮತ್ತು ಪ್ರಥಮ ರ್ಯಾಂಕ್ ಪಡೆದ 69 ವಿದ್ಯಾರ್ಥಿಗಳಿಗೆ ಮಾತ್ರ ನಿನ್ನೆ ನಡೆದ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.
ತುಳುವಿನ ಮೊದಲ ಬ್ಯಾಚ್ನಲ್ಲಿ ರ್ಯಾಂಕ್ ಪಡೆದ ಬ್ಯಾಂಕ್ ಉದ್ಯೋಗಿ!
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 2018-19ರಲ್ಲಿ ತುಳು ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಆರಂಭಿಸಲಾಗಿತ್ತು. ಇದರ ಮೊದಲ ಬ್ಯಾಚ್ ಮುಗಿದಿದ್ದು ಮೊದಲ ಬ್ಯಾಚ್ನ ವಿದ್ಯಾರ್ಥಿ ಭರತೇಶ್ ಅವರು ಮೊದಲ ರ್ಯಾಂಕ್ ಪಡೆದಿದ್ದಾರೆ. ಬ್ಯಾಂಕ್ ಅಫ್ ಬರೋಡದ ಉದ್ಯೋಗಿಯಾಗಿದ್ದ ಇವರು ಉದ್ಯೋಗದ ನಡುವೆ ತುಳುವಿನಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡಿದ್ದರು.
ಬ್ಯಾಡ್ಮಿಂಟನ್ ಚಾಂಪಿಯನ್ ಪಿಜಿಡಿಬಿಎಂನಲ್ಲಿ ಪ್ರಥಮ
ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಜಯಲಕ್ಷ್ಮಿ ಅವರು ಪಿಜಿಡಿಬಿಎಂನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗದ್ದು, 6 ಚಿನ್ನದ ಪದಕ ಪಡೆದಿದ್ದರು. ಕ್ರೀಡಾ ಕೋಟದಲ್ಲಿ ಮೂಡಬಿದ್ರೆ ಆಳ್ವಾಸ್ನಲ್ಲಿ ಉಚಿತ ಶಿಕ್ಷಣ ಪಡೆದಿದ್ದರು. ಕ್ರೀಡೆಯಲ್ಲಿ ಸಾಧನೆ ಮಾಡುವ ಜೊತೆಗೆ ಇವರು ಕಲಿಕೆಯಲ್ಲಿಯೂ ಸಾಧನೆ ಮಾಡಿದ್ದಾರೆ.