ಮಂಗಳೂರು:ವ್ಯವಹಾರ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ವಿಯೆಟ್ನಾಂ ದೇಶದ ಪ್ರಜೆಗಳಿಗೆ ಕೋವಿಡ್ ಸೋಂಕು ತಗುಲಿತ್ತು. ನಗರದ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಇದೀಗ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಥೀ ಲೀನ್ ಗುಯೇನ್ (36), ವೋ ವಾನ್ ದಾಟ್ (29) ಹಾಗೂ ಫಾಮ್ ವ್ಯಾನ್ ಥುವಾನ್ (29) ಸೋಂಕಿನಿಂದ ಗುಣಮುಖರಾದ ವಿಯೆಟ್ನಾಂ ಪ್ರಜೆಗಳು. ವ್ಯವಹಾರ ನಿಮಿತ್ತ ವಿಯೆಟ್ನಾಂ ದೇಶದಿಂದ 11 ಯುವ ಉದ್ಯಮಿಗಳ ತಂಡ ಮಂಗಳೂರಿಗೆ ಆಗಮಿಸಿತ್ತು. ಇವರು ಮಂಗಳೂರಿನಿಂದ ತಮ್ಮ ದೇಶದ ಗೋಡಂಬಿ ಕಾರ್ಖಾನೆಗಳಿಗೆ ಗೋಡಂಬಿ ಆಮದು ಮಾಡಿಕೊಳ್ಳುವ ಸಲುವಾಗಿ ವ್ಯವಹಾರ ಕುದುರಿಸಲು ಬಂದಿದ್ದರು. ಮಂಗಳೂರಿನ ಕೋಡಿಕಲ್ ಎಂಬಲ್ಲಿ ವಾಸ್ತವ್ಯವಿದ್ದ ಅವರಿಗೆ ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು.