ಬಂಟ್ವಾಳ (ದಕ್ಷಿಣ ಕನ್ನಡ):ಬಂಟ್ವಾಳ ಪೇಟೆ ಮತ್ತೆ ಕೊರೊನಾದಿಂದ ಸುದ್ದಿಯಾಗಿದೆ. ಬಂಟ್ವಾಳ ಪೇಟೆಯ 67 ವರ್ಷ ವಯಸ್ಸಿನ ವೃದ್ಧರೊಬ್ಬರಿಗೆ ಮೇ 1ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಅವರ ಸಂಪರ್ಕದಿಂದ ಪುತ್ರ(30) ಹಾಗೂ ಅವರ ಮನೆಯಲ್ಲೇ ವಾಸವಿರುವ ಅಕ್ಕ(70), ತಂಗಿ(60)ಗೆ ಶನಿವಾರ ಸೋಂಕು ದೃಢಪಟ್ಟಿದೆ.
ಮೇ 1ರಂದು ವೃದ್ಧರಿಗೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಆ ಮನೆಯ 8 ಜನರನ್ನು ಕ್ವಾರಂಟೈನ್ ಮಾಡಿ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.
ಅವರಲ್ಲಿ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೇ 1ರಂದು ಸೋಂಕು ಪಾಸಿಟಿವ್ ಆದ ವೃದ್ಧರಿಗೆ ಬಂಟ್ವಾಳದಲ್ಲಿ ಏಪ್ರಿಲ್ 19ರಂದು ಮೃತಪಟ್ಟ 45 ವಯಸ್ಸಿನ ಮಹಿಳೆಯ ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿತ್ತು.
ಇಂದು ಮೂರು ಪ್ರಕರಣಗಳು ಪಾಸಿಟಿವ್ ಆಗುವುದರೊಂದಿಗೆ ಬಂಟ್ವಾಳ ಪೇಟೆಯಲ್ಲೇ 9 ಪ್ರಕರಣಗಳು ಪಾಸಿಟಿವ್ ಆಗಿದೆ. ಇದರೊಂದಿಗೆ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 12 ಪ್ರಕರಣಗಳು ಪಾಸಿಟಿವ್ ಆಗಿದೆ. ತಾಲೂಕಿನ ಸಜಿಪನಡು ಮತ್ತು ತುಂಬೆ ಗ್ರಾಮದಲ್ಲಿ ಪಾಸಿಟಿವ್ ಆದ ಮಗು ಮತ್ತು ಯುವಕ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ನರಿಕೊಂಬು ಗ್ರಾಮದ ಮಹಿಳೆ, ಬಂಟ್ವಾಳ ಪೇಟೆಯ ಇಬ್ಬರು ಪುರುಷರು, ಮೂವರು ಮಹಿಳೆಯರು, ಒಬ್ಬ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳದಲ್ಲಿ ಪಾಸಿಟಿವ್ ಆಗಿದ್ದ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.