ಪುತ್ತೂರು:ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‌ಗೆ ಮತ್ತೊಮ್ಮೆ ಗಾಂಧಿ ಗ್ರಾಮ ಪುರಸ್ಕಾರ ಒಲಿದುಬಂದಿದೆ. 2018-19ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ 2ನೇ ಬಾರಿಗೆ ಕುಟ್ರುಪ್ಪಾಡಿ ಆಯ್ಕೆಯಾಗಿದೆ.
ಕಳೆದ ವರ್ಷವೂ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಗಾಂಧಿ ಗ್ರಾಮ ಪುರಸ್ಕಾರ ಪಡೆದಿತ್ತು. ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಒಟ್ಟು ಸಾಧನೆಯನ್ನು ಪರಿಗಣಿಸಿ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆ ಈ ಪುರಸ್ಕಾರವನ್ನು ನೀಡುತ್ತಿದೆ. ಅ. 2ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಗ್ರಾ.ಪಂ. ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗೆ ಈ ಪುರಸ್ಕಾರವನ್ನು ನೀಡಲಿದ್ದಾರೆ. ಈ ಪುರಸ್ಕಾರವು 5 ಲಕ್ಷ ರೂ.ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ರಾಜ್ಯದ ಪ್ರತೀ ತಾಲೂಕಿನ ಒಂದು ಪಂಚಾಯತ್‌ಗೆ ಪ್ರತೀ ವರ್ಷ ಗಾಂಧಿ ಜಯಂತಿ ಸಂದರ್ಭ ಈ ಪುರಸ್ಕಾರ ನೀಡಲಾಗುತ್ತಿದೆ.
2018-19ನೇ ಸಾಲಿನಲ್ಲಿ ಗ್ರಾಮ ಪಂಚಾಯತ್ ಸ್ವಂತ ಸಂಪನ್ಮೂಲಗಳ ಕ್ರೂಢೀಕರಣ, ಅನುದಾನಗಳ ಸಮರ್ಪಕ ಬಳಕೆ, ಜಮಾಬಂದಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಪಾವತಿ, ಮೂಲ ಸೌಕರ್ಯ ವ್ಯವಸ್ಥೆ, ಗ್ರಾ.ಪಂ. ವಿವಿಧ ಸಭೆಗಳು, ವಸತಿ ಯೋಜನೆ, ನೈರ್ಮಲ್ಯೀಕರಣ, ಸ್ವತ್ಛತೆ, ನಗದು ರಹಿತ ವ್ಯವಹಾರ ಜಾರಿ, ಕಚೇರಿಗೆ ಸಂಪೂರ್ಣ ಸೋಲಾರ್ ವ್ಯವಸ್ಥೆ ಕಲ್ಪಿಸಿರುವುದು, ವಿದ್ಯುತ್ ಬಿಲ್ ಸಂಪೂರ್ಣ ಪಾವತಿಸಿ ಉಳಿಕೆ ಅನುದಾನವನ್ನು ಗ್ರಾ.ಪಂ.ಗೆ ಬಳಸಿಕೊಂಡಿರುವುದು, ಸಕಾಲ ಸೇವೆ ಒದಗಿಸಿರುವುದು ಸಹಿತ ಗ್ರಾ.ಪಂ. ಅಳವಡಿಸಿಕೊಂಡ ವಿಶೇಷ ವಿಧಾನ ಆಧರಿಸಿ ಈ ಪುರಸ್ಕಾರ ನೀಡಲಾಗುತ್ತಿದೆ.
ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನಿಂದ ಸತತ 2ನೇ ಬಾರಿ ಕುಟ್ರುಪ್ಪಾಡಿ ಗ್ರಾ.ಪಂ.ಆಯ್ಕೆಯಾಗಿರುವುದು ಗ್ರಾಮದ ಜನತೆ ಹಾಗೂ ಪಂಚಾಯತ್‌ಗೆ ಹೆಮ್ಮೆಯ ವಿಷಯ. ಪಂಚಾಯತ್‌ನಲ್ಲಿ ಆಡಳಿತಾತ್ಮಕವಾಗಿ ಉತ್ತಮ ಕೆಲಸಗಳು ನಡೆದು ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ದೊರೆತಿದೆ. ಪಂಚಾಯತ್‌ನ ಅಧಿಕಾರಿ ವರ್ಗ ಹಾಗೂ ಆಡಳಿತ ಮಂಡಳಿಯ ಹೊಂದಾಣಿಕೆ, ಜನರ ಸಹಕಾರದಿಂದಾಗಿ ಉತ್ತಮ ಕೆಲಸಗಳು ನಡೆದು ಪ್ರಶಸ್ತಿ ದೊರೆತಿದೆ ಎಂದು ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.