ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಹತ್ಯೆಗೀಡಾದ ನಾಲ್ವರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಲಾಗಿದೆ. ಸುಳ್ಯದ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್, ಮಂಗಳೂರಿನ ಸುರತ್ಕಲ್ನ ಮೊಹಮ್ಮದ್ ಫಾಜಿಲ್, ಅಬ್ದುಲ್ ಜಲೀಲ್ ಮತ್ತು ದೀಪಕ್ ರಾವ್ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ.
ಬೆಳ್ಳಾರೆಯ ಮಸೂದ್ ಎಂಬುವರನ್ನು 2022ರ ಜುಲೈ 19 ರಂದು ಹತ್ಯೆ ಮಾಡಲಾಗಿತ್ತು. ಸುರತ್ಕಲ್ನ ಮೊಹಮ್ಮದ್ ಫಾಜಿಲ್ರನ್ನು 2022 ಜುಲೈ 28 ರಂದು ಕೊಲೆ ಮಾಡಲಾಗಿತ್ತು. 2022 ಡಿಸೆಂಬರ್ 24ರಂದು ಸುರತ್ಕಲ್ನ ಅಬ್ದುಲ್ ಜಲೀಲ್ ಹತ್ಯೆಗೀಡಾಗಿದ್ದರು. ಸುರತ್ಕಲ್ನ ದೀಪಕ್ ರಾವ್ ಅವರನ್ನು 2018ರ ಜನವರಿ 3ರಂದು ಕೊಲೆ ಮಾಡಲಾಗಿತ್ತು. ಆಗಿನ ವಿಧಾನಸಭೆ ಎಲೆಕ್ಷನ್ಗೂ ಮುನ್ನ ನಡೆದ ಈ ಹತ್ಯೆ ಪ್ರಕರಣ ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿ ಚುನಾವಣಾ ಚರ್ಚಾ ವಿಷಯವಾಗಿ ಮಾರ್ಪಟ್ಟಿತ್ತು.
ಇನ್ನು 2022 ಜುಲೈ 28 ರಂದು ಫಾಜಿಲ್ ಹತ್ಯೆ ನಡೆದಿತ್ತು. ಇದಕ್ಕೂ ಕೆಲದಿನಗಳ ಮುನ್ನ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ನೆಟ್ಟಾರು ಕೊಲೆ ಆಗಿತ್ತು. ಬಳಿಕ ಕೆಲ ದಿನಗಳ ಅಂತರದಲ್ಲಿ ಜಲೀಲ್ ಎಂಬಾತನ ಕೊಲೆ ಮಾಡಲಾಗಿತ್ತು. ಈ ಹತ್ಯೆಗಳಿಂದ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದರಲ್ಲಿ ಕೆಲವು ಘಟನೆಗಳು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದವು. ಇದರಲ್ಲಿ ಪ್ರವೀಣ್ ನೆಟ್ಟಾರು ಹೊರತುಪಡಿಸಿ ಬೇರೆ ಯಾರಿಗೂ ಸರ್ಕಾರ ಪರಿಹಾರ ವಿತರಣೆ ಮಾಡಿರಲಿಲ್ಲ.