ಬಂಟ್ವಾಳ (ಮಂಗಳೂರು): ಯುವತಿ ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾವಳಪಡೂರು ಗ್ರಾಮದ ಮಧ್ವಗುತ್ತು ರಾಜೀವ ಶೆಟ್ಟಿ-ಮೀನಾ ದಂಪತಿಯ ಪುತ್ರಿ ಮಿತ್ರಾ ಶೆಟ್ಟಿ (23) ಮೃತರು. ಕಾವಳಮೂಡೂರು ಪುಳಿಮಜಲಿನ ನಿವಾಸಿಯಾಗಿದ್ದ ಮಿತ್ರಾ ಅವರ ತಂದೆ ಹಾಗೂ ಸಹೋದರ ಬೆಂಗಳೂರಿನಲ್ಲಿದ್ದಾರೆ. ಪ್ರಸ್ತುತ ಮಿತ್ರಾ ಅವರು ಬಿ.ಸಿ.ರೋಡ್‌ನಲ್ಲಿ ಖಾಸಗಿ ಉದ್ಯೋಗದಲ್ಲಿದ್ದು, ಮಧ್ವದಲ್ಲಿ ದೊಡ್ಡಮ್ಮನ ಮನೆಯಲ್ಲಿ ತಾಯಿ ಜತೆ ವಾಸವಿದ್ದರು.
ಮಂಗಳವಾರ ರಾತ್ರಿ ಊಟ ಮುಗಿಸಿ ತಾಯಿಯೊಂದಿಗೆ ಮಲಗಿದ್ದರು. ಬೆಳಗ್ಗೆ ಹೊತ್ತು ಕಳೆದರೂ ಏಳದಿರುವುದನ್ನು ಗಮನಿಸಿದ ತಾಯಿ ಎಬ್ಬಿಸುವಾಗ ಅವರು ಮೃತಪಟ್ಟಿರುವುದು ತಿಳಿದು ಬಂದಿದೆ. ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸಾವಿಗೆ ಹೃದಯಾಘಾತವೇ ಕಾರಣವೆಂದು ವೈದ್ಯರು ದೃಢಪಡಿಸಿದ್ದಾರೆ. ಮೃತದೇಹವನ್ನು ಹೆಚ್ಚಿನ ಪರೀಕ್ಷೆಗಾಗಿ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿದೆ. ಮಿತ್ರಾ ಪದವೀಧರೆಯಾಗಿದ್ದು, ಸ್ಥಳೀಯವಾಗಿ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಯುವತಿಯ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಸಂತಾಪ ಸೂಚಿಸಿದ್ದಾರೆ.
SSLC ವಿದ್ಯಾರ್ಥಿನಿ ಸಾವು (ಇತ್ತೀಚೆಗೆ ನಡೆದ ಘಟನೆಗಳು):ವಾಕಿಂಗ್ಗೆ ತೆರಳಿದ್ದ ಎಸ್ಎಸ್ಎಸ್ಸಿ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ನಿರ್ಮಲ ಶಾಲೆಯಲ್ಲಿ ನಡೆಯಿತು. ಪೆಲಿಸಾ ಮೃತ ವಿದ್ಯಾರ್ಥಿನಿ. ಕುಸಿದು ಬಿದ್ದ ತಕ್ಷಣ ಶಾಲೆಯ ಸಿಬ್ಬಂದಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲಾಗಲೇ ವಿದ್ಯಾರ್ಥಿನಿ ಕೊನೆಯುಸಿರೆಳೆದ್ದರು. ವಿದ್ಯಾರ್ಥಿನಿಯ ತಾಯಿ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೆಲಿಸಾ ಮೂಲತಃ ಬೆಂಗಳೂರಿನ ನಿವಾಸಿ. ಇವರ ತಂದೆ ನಿಧನರಾಗಿದ್ದರು. ಕ್ರೈಸ್ತ ಮಿಷನರಿ ಸಹಾಯದಿಂದ ವಿದ್ಯಾಭ್ಯಾಸಕ್ಕಾಗಿ ಗುಂಡ್ಲುಪೇಟೆ ನಿರ್ಮಲ ಶಾಲೆಗೆ ದಾಖಲಾಗಿದ್ದು, ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿತ್ತು.