ಮಂಗಳೂರು: ಸುರತ್ಕಲ್ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯ(ಎನ್‌ಐಟಿಕೆ)ದ 20ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕೇಂದ್ರ ಶಿಕ್ಷಣ, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾಗಿಯಾಗಿ, 1,787 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
ಘಟಿಕೋತ್ಸವದಲ್ಲಿ ಪದವಿ ಪಡೆದ 1,787 ವಿದ್ಯಾರ್ಥಿಗಳಲ್ಲಿ 126 ಮಂದಿ ಪಿಹೆಚ್‌ಡಿ, 817 ಮಂದಿ ಪಿ.ಜಿ, 844 ಮಂದಿ ಬಿ.ಟೆಕ್ ವಿದ್ಯಾರ್ಥಿಗಳು ಸೇರಿದ್ದಾರೆ. 249 ಬಿ.ಟೆಕ್ ವಿದ್ಯಾರ್ಥಿಗಳಿಗೆ ತಮ್ಮ ಪದವಿ ಜೊತೆ ಇತರೆ ವಿಭಾಗಗಳಲ್ಲಿ ಮೈನರ್ ಪದವಿ ಪ್ರದಾನ ಮಾಡಲಾಯಿತು. ಇದೇ ಮೊದಲ ಬಾರಿಗೆ ಎನ್‌ಐಟಿಕೆ ಬಿ.ಟೆಕ್(ಆನರ್ಸ್) ಪದವಿಯನ್ನು ನೀಡಲಾಯಿತು. ಅತ್ಯಧಿಕ ಅಂಕ ಗಳಿಸಿದ 9 ಬಿ.ಟೆಕ್ ವಿದ್ಯಾರ್ಥಿಗಳು ಹಾಗೂ 30 ಪಿಜಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಪದವಿ ಪ್ರದಾನ ಬಳಿಕ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸುಸ್ಥಿರ ಇಂಧನ ಅಭಿವೃದ್ಧಿ ಅತ್ಯಗತ್ಯವಿದ್ದು, ಈ ನಿಟ್ಟಿನಲ್ಲಿ ಎನ್‌ಐಟಿಕೆ ತಂತ್ರಜ್ಞಾನ ಮಹತ್ತರ ಪಾತ್ರವಹಿಸಲಿದೆ. ಎನ್‌ಐಟಿಕೆ ಈಗಾಗಲೇ ಆಹಾರ ತ್ಯಾಜ್ಯ ಬಳಸಿ ನೂರು ಕಿಲೋ ಬಯೋಗ್ಯಾಸ್ ಉತ್ಪಾದಿಸುತ್ತಿದೆ. ಇದನ್ನು ಸರ್ವಸಜ್ಜಿತ ಹೈಡ್ರೋಜನ್ ಇಂಧನ ಸ್ಥಾವರವಾಗಿ ಅಭಿವೃದ್ಧಿಯಾಗುವ ವಿಪುಲ ಅವಕಾಶ ಹೊಂದಿದೆ. ಈ ನಿಟ್ಟಿನಲ್ಲಿ ಹೈಡ್ರೋಜನ್ ಶಕ್ತಿ ಭವಿಷ್ಯದ ಇಂಧನ ಮಾರುಕಟ್ಟೆಯಾಗಲಿದೆ ಎಂದರು.