ಮಂಗಳೂರು:ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್ 'ಜೋಕ್ ಆಫ್ ದಿ ಈಯರ್' ಆಗಿದೆ. ಈ ಪ್ಯಾಕೇಜ್ ನಿಂದ ಏನೂ ಪ್ರಯೋನವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಲೇವಡಿ ಮಾಡಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹೆಚ್ಚು ನೀಡಿರುವಂತದ್ದು ಸಾಲ. ಸಾಲ ಪ್ಯಾಕೇಜ್ ಹೇಗಾಗುತ್ತದೆ?. ಕೇರಳದಲ್ಲಿ 20 ಸಾವಿರ ಕೋಟಿ ರೂ. ಪ್ಯಾಕೇಜ್ ನೀಡಲಾಯಿತು. ಅದು ಸಾಲ ನೀಡಿದ್ದಲ್ಲ, ಎಲ್ಲಾ ಹಣವನ್ನೂ ಜನರಿಗೆ ಹಂಚಲಾಗಿತ್ತು ಎಂದರು.
20 ಲಕ್ಷ ಕೋಟಿ ಪ್ಯಾಕೇಜ್ 'ಜೋಕ್ ಆಫ್ ದಿ ಈಯರ್': ಹರೀಶ್ ಕುಮಾರ್ ಲೇವಡಿ ಕಟ್ಟಕಡೆಯ ಜನರ ಕೈಯಲ್ಲೂ ಹಣ ಚಲಾವಣೆಯಾದರೆ ದೇಶದ ಆರ್ಥಿಕತೆಗೆ ಬಲ ಬರುತ್ತದೆ ಎಂಬ ಉದ್ದೇಶದಿಂದ ರಾಹುಲ್ ಗಾಂಧಿಯವರು ಕಾಂಗ್ರೆಸ್ ಸರ್ಕಾರ ಬಂದಲ್ಲಿ ನ್ಯಾಯ್ ಎಂಬ ಯೋಜನೆ ಜಾರಿಗೆ ತರಲಾಗುತ್ತದೆ ಎಂಬ ಉತ್ತಮ ಯೋಜನೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು. ಆದ್ದರಿಂದ ಜನರ ಕೈಗೆ ಹಣ ಬರುವುದೆಂದರೆ ಸಾಲ ಕೊಡುವುದಲ್ಲ. ಸಾಲ ಕೊಟ್ಟಲ್ಲಿ ಬಡ್ಡಿ ನೀಡಿ ಮತ್ತೆ ಆರ್ಥಿಕವಾಗಿ ಜನರು ಸಂಕಷ್ಟಕ್ಕೊಳಗಾತ್ತಾರೆಯೇ ವಿನಃ ಅವರು ಜೀವನಮಟ್ಟ ಸುಧಾರಣೆ ಆಗುವುದಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಸಾಲಗಳನ್ನೂ ಪ್ಯಾಕೇಜ್ ಎಂದು ಘೋಷಣೆ ಮಾಡಿದ್ದಲ್ಲಿ ಜನರಿಗೆ ಪ್ರಯೋಜನ ಆಗುವುದಿಲ್ಲ.
ವಲಸೆ ಕಾರ್ಮಿಕರಿಗೆ ಕೋಟಿಗಟ್ಟಲೇ ಹಣ ಪರಿಹಾರವಾಗಿ ಇರಿಸಲಾಗಿದೆ. ಆದರೆ, ಈಗಾಗಲೇ ಎಲ್ಲಾ ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ಹೋಗಿಯಾಗಿದೆ. ಎಲ್ಲಾ ಲೂಟಿಯಾದ ಬಳಿಕ ಕೋಟೆ ಬಾಗಿಲು ಮುಚ್ಚಿದಂತಾಗಿದೆ ಎಂದು ಹರೀಶ್ ಕುಮಾರ್ ಕಿಡಿಕಾರಿದರು.
ಕೊರೊನಾ ಸೋಂಕಿನಿಂದ ಸಂಕಷ್ಟಕ್ಕೊಳಗಾದ ದೇಶದ ಜನತೆಗೆ ನೆರವು ನೀಡುವ ಉದ್ದೇಶದಿಂದ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ. ಆದರೆ ಪ್ರಧಾನಿ ಮೋದಿಯವರು ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್ ನಲ್ಲಿ ಜನಧನ್ ಹಣ, ಕೃಷಿಗಾಗಿ ರೈತ ಸಮ್ಮಾನ್ ವರ್ಷಕ್ಕೆ ಎರಡು ಸಲ ನೀಡುವ ಹಣ, ಎನ್ಆರ್ ಇಜಿ ಹಾಗೂ ಸಾಲಗಳು ಇದನ್ನೆಲ್ಲಾ ಸೇರಿಸಲಾಗಿದೆ ಎಂದು ಹರೀಶ್ ಕುಮಾರ್ ಹೇಳಿದ್ದಾರೆ.