ಪುತ್ತೂರು: ತಾಲೂಕಿನಲ್ಲಿ ಕಳೆದ 2 ತಿಂಗಳಿನಿಂದ ವೃದ್ಧಾಪ್ಯ ವೇತನ, ವಿಕಲಚೇತನ ವೇತನ ಸಹಿತ ಸರ್ಕಾರಿ ಸೌಲಭ್ಯ ಬಂದಿಲ್ಲ. ಹೀಗಾಗಿ ಇದನ್ನೇ ನಂಬಿರುವ ಫಲಾನುಭವಿಗಳ ಬದುಕು ಸಂಕಷ್ಟಕ್ಕೀಡಾಗಿದೆ.
2 ತಿಂಗಳಾದರು ಬಂದಿಲ್ಲ ಸರ್ಕಾರಿ ಸೌಲಭ್ಯ: ಫಲಾನುಭವಿಗಳ ಸಂಕಷ್ಟ ಕೇಳೋರ್ಯಾರು? ಪುತ್ತೂರು ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ವೃದ್ಧರು ಸರ್ಕಾರ ನೀಡುತ್ತಿರುವ ಈ ವೃದ್ಧಾಪ್ಯ ವೇತನವನ್ನು ಕಾಯುವಂತಾಗಿದ್ದು, ಕಳೆದ ಎರಡು ತಿಂಗಳಿನಿಂದ ಹಣ ಬಂದಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಡಕ್ಕೀಡಾಗಿರುವ ಫಲಾನುಭವಿಗಳಿಗೆ ಇದು ದೊಡ್ಡ ಸಮಸ್ಯೆಯಾಗಿ ಕಾಡಿದೆ.
ತಾಲೂಕಿನ ವೃದ್ಧರು, ಎಂಡೋಸಲ್ಫಾನ್ ಪೀಡಿತರು, ವಿಶೇಷಚೇತನರು ಸಹಿತ ಯಾರಿಗೂ ವೇತನ ಸೌಲಭ್ಯ ಬಂದಿಲ್ಲ. ತಾಲೂಕಿನಲ್ಲಿ 948 ಮಂದಿ ಗುರುತಿಸಲಾದ ಎಂಡೋ ಪೀಡಿತರಿದ್ದು, ಇವರಿಗೆ ಸರ್ಕಾರದ ವತಿಯಿಂದ ಪಿಂಚಣಿ ನೀಡಲಾಗುತ್ತಿತ್ತು. 823 ಮಂದಿಗೆ ವೃದ್ಧಾಪ್ಯ ವೇತನ, 1280 ಮಂದಿಗೆ ವಿಶೇಷಚೇತನ ವೇತನ, 991 ಮಂದಿಗೆ ತೀವ್ರ ಸ್ವರೂಪದ ವಿಕಲಚೇತನ ವೇತನ, 5601 ಮಂದಿಗೆ ಸಂಧ್ಯಾ ಸುರಕ್ಷಾ ವೇತನ, 942 ಮಂದಿಗೆ ಮನಸ್ವಿನಿ ವೇತನ, 12 ಮಂದಿಗೆ ರೈತ ವಿಧವಾ ವೇತನ ನೀಡಲಾಗುತ್ತಿದ್ದು, ಒಟ್ಟು 14,591 ಮಂದಿ ಸೌಲಭ್ಯ ಪಡೆಯುತ್ತಿದ್ದರು.
ಇದೀಗ ಎರಡು ತಿಂಗಳುಗಳಿಂದ ಈ ಯಾವುದೇ ವೇತನಗಳು ಫಲಾನುಭವಿಗಳ ಕೈಗೆ ತಲುಪಿಲ್ಲ. ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿಯೂ ಸರ್ಕಾರಿ ಸೌಲಭ್ಯದಿಂದ ವಂಚಿತರಾದ ಈ ಫಲಾನುಭವಿಗಳು ವೇತನಕ್ಕಾಗಿ ಕಾಯುತ್ತಾ ಕಷ್ಟದ ಬದುಕನ್ನು ನಡೆಸುತ್ತಿದ್ದಾರೆ.
ಅಧಿಕೃತ ಆದೇಶ ಬಂದ ತಕ್ಷಣ ಪರಿಹಾರ:
ವೃದ್ಧಾಪ್ಯ ವೇತನ ಸಹಿತ ಎಲ್ಲಾ ಬಗೆಯ ಸರ್ಕಾರದಿಂದ ನೀಡುತ್ತಿರುವ ವೇತನಗಳು ಕೆಲವು ದಿನಗಳಲ್ಲಿ ಅವರ ಖಾತೆಗೆ ಬರಲಿದೆ. ಈ ಬಗ್ಗೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಸರ್ಕಾರದಿಂದ ಅಧಿಕೃತ ಆದೇಶ ಬಂದ ತಕ್ಷಣ ಈ ಹಣ ಫಲಾನುಭವಿಗಳ ಖಾತೆಗೆ ಬರಲಿದೆ. ಕೆಲವು ದಿನಗಳಲ್ಲಿ ಜನತೆಯ ಈ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದು ತಹಶೀಲ್ದಾರ್ ರಮೇಶ್ ತಿಳಿಸಿದ್ದಾರೆ.