ಮಂಗಳೂರು: ಮನೆ ಬಾಡಿಗೆ ಕೊಡುವ ಜಾಹೀರಾತು ನೀಡಿದ್ದ ಹಿರಿಯ ನಾಗರಿಕರಿಗೆ ಸೈನಿಕನೆಂದು ಹೇಳಿ 2.41 ಲಕ್ಷ ರೂಪಾಯಿ ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.
ಹಿರಿಯ ನಾಗರೀಕರೊಬ್ಬರು ಅಪಾರ್ಟ್ ಮೆಂಟ್ ಬಾಡಿಗೆ ನೀಡುವ ಬಗ್ಗೆ ಆನ್ಲೈನ್ ಸೈಟ್ವೊಂದರಲ್ಲಿ ಜಾಹೀರಾತು ನೀಡಿದ್ದರು. ಡಿಸೆಂಬರ್ 8 ರಂದು ಯಾರೋ ಅಪರಿಚಿತ ವ್ಯಕ್ತಿ ತಾನು ಆಶೀಶ್ ಕುಮಾರ್ ಹಾಗೂ ತಾನು ಭಾರತೀಯ ಸೇನೆಯಲ್ಲಿ ನೌಕರನಾಗಿರುವುದಾಗಿ ತಿಳಿಸಿ ಮಾತನಾಡಿದ್ದಾನೆ.
ಆನ್ಲೈನ್ ಸೈಟ್ನಲ್ಲಿ ಅಪಾರ್ಟ್ಮೆಂಟ್ ಖಾಲಿ ಇರುವ ಬಗ್ಗೆ ಮಾತನಾಡಿ ನಂತರ ಬಾಡಿಗೆ ವಿಷಯವಾಗಿ ಅವರಲ್ಲಿ ವಿಚಾರಿಸಿಕೊಂಡು ನಂತರ ಮುಂಗಡ ಹಣ ಪಾವತಿಸುವುದಾಗಿಯೂ ಹಾಗೂ ಆರ್ಮಿ ಇಲಾಖೆಯಿಂದ ಕಮಾಂಡಿಂಗ್ ಪೇಮೆಂಟ್ ನಿಂದ ಹಣ ಸಂದಾಯವಾಗುವುದಾಗಿ ತಿಳಿಸಿದ್ದಾನೆ. ವಂಚನೆಗೊಳಗಾದವರು ಮೊದಲಿಗೆ 1/-ರೂ,5/-ರೂ., 49,999/-ರೂ. ಮತ್ತು 49994/-ರೂಗಳ UPI CODE ಗಳನ್ನು ವಾಟ್ಸ ಆಪ್ ಮುಖಾಂತರ ಕಳುಹಿಸಿದ್ದಾರೆ. ನಂತರ ಸತ್ಯವೆಂದು ಭಾವಿಸಿ ತಮ್ಮ ಬಾಬ್ತು ಹೆಚ್ಡಿಎಫ್ಸಿ ಬ್ಯಾಂಕ್, ಮಲ್ಲೇಶ್ವರಂ ಶಾಖೆ ಖಾತೆ ನಂಬರ್ನಿಂದ ಗೂಗಲ್ ಪೇ ಮುಖಾಂತರ ದಿನಾಂಕ ಡಿಸೆಂಬರ್ 8 ರಂದು 1,41,999/-ರೂ ಪಾವತಿಸಿರುತ್ತಾರೆ.
ನಂತರ ದಿನಾಂಕ ಡಿಸೆಂಬರ್ 9 ರಂದು ಈ ಅಪರಿಚಿತ ವ್ಯಕ್ತಿ ಮತ್ತೊಮ್ಮೆ ಕರೆ ಮಾಡಿ ಅದೇ ರೀತಿ ಮತ್ತೊಮ್ಮೆ ಪಾವತಿ ಮಾಡಬೇಕೆಂದು ಹಾಗೂ ಈ ಹಣ ಆರ್ಮಿ ಇಲಾಖೆಯಿಂದ ಕಮಾಂಡಿಂಗ್ ಪೇಮೆಂಟ್ ನಿಂದ ದೊರೆಯುವುದಾಗಿ ನಂಬಿಸಿದ್ದಾನೆ. ಹಿರಿಯ ನಾಗರಿಕರು ಅದೇ ರೀತಿ ಐಎಂಪಿ ಎಸ್ ಮುಖಾಂತರ 1,00,000/-ರೂ ಹಣ ಪಾವತಿಸಿರುತ್ತಾರೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಆನ್ಲೈನ್ ಮುಖಾಂತರ ಆಶೀಶ್ ಕುಮಾರ್ ಎಂದು ಪರಿಚಯಿಸಿಕೊಂಡು ತಾನು ಆರ್ಮಿಯಲ್ಲಿ ನೌಕರನೆಂದು ಹಿರಿಯ ನಾಗರಿಕರಿಗೆ ನಂಬಿಸಿ ಆನ್ಲೈನ್ ಮುಖಾಂತರ ಒಟ್ಟು 2,41,999/- ರೂಗಳನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾನೆ. ಈ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೆನ್ ಪೊಲೀಸ್ ಠಾಣೆಯಲ್ಲಿ ವಂಚೆನಗೊಳಗಾದವರು ದೂರು ನೀಡಿದ್ದಾರೆ.
ಆನ್ಲೈನ್ ವಂಚನೆ ತಡೆಯಲು ಸೇಫ್ಬ್ರೌಸ್ ಆ್ಯಪ್ ಸಿದ್ಧ:ಆನ್ಲೈನ್ ಮೂಲಕ ಹಣಕಾಸು ವಂಚನೆ ನಡೆಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರದ ಅಧೀನ ಸ್ಟಾರ್ಟ್ ಅಪ್ ಸಂಸ್ಥೆ ಸೈಸೆಕ್ ಹೊಸ ಆ್ಯಪ್ ಸಿದ್ಧಪಡಿಸಿದೆ. ಬ್ರೌಸ್ ಸೇಫ್ ಎನ್ನುವ ಆ್ಯಪ್ ಸಿದ್ಧಪಡಿಸಿದ್ದು, ಈ ಆ್ಯಪ್ ಬಳಸಿದರೆ ಲಿಂಕ್ಗಳನ್ನು ಒತ್ತಿ ಹಣ ಕಳೆದುಕೊಳ್ಳುವುದಕ್ಕೆ ಬ್ರೇಕ್ ಬೀಳಲಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಸೈಟ್ ಕೊಡಿಸೋದಾಗಿ ₹30 ಲಕ್ಷ ವಂಚನೆ: ಅಮೆರಿಕದಿಂದ ಪೊಲೀಸ್ ಕಮೀಷನರ್ಗೆ ದೂರು ನೀಡಿದ ವ್ಯಕ್ತಿ