ಬಂಟ್ವಾಳ: ಮುಂಬೈನಲ್ಲಿ ಇಂಧನ ಸಂಸ್ಥೆ ಒಎನ್ಜಿಸಿಯ ರಿಗ್ ಮರುಜೋಡಣೆ(ರಿಲಾಂಚಿಂಗ್) ಕಾರ್ಯದಲ್ಲಿ ನಿರತರಾಗಿದ್ದ ವೇಳೆ ತೌಕ್ತೆ ಚಂಡಮಾರುತದಿಂದ ಬಾರ್ಜ್ ಮುಳುಗಡೆಯಾಗಿತ್ತು. ಈ ವೇಳೆ ಸುಮಾರು 10 ಗಂಟೆಗಳ ಕಾಲ ಸಮುದ್ರದ ನೀರಿನಲ್ಲಿಯೇ ಈಜಿ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಯುವಕರು ಬದುಕಿ ಬಂದಿದ್ದಾರೆ. ಇವರು ತಮ್ಮ ಸಾಹಸ ಮತ್ತು ಧೈರ್ಯದಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬದುಕಿ ಬಂದವರಲ್ಲಿ ಒಬ್ಬರು ಬಂಟ್ವಾಳದವರಾದರೆ, ಮತ್ತೊಬ್ಬರು ತೊಕ್ಕೊಟ್ಟಿನವರು. ಬಾರ್ಜ್ನಲ್ಲಿ ಸುಮಾರು 260 ಮಂದಿ ಕೆಲಸ ಮಾಡುತ್ತಿದ್ದು, ಅದರಲ್ಲಿ ಕರ್ನಾಟಕದ ತೊಕ್ಕೊಟ್ಟು ಕಲ್ಲಾಪಿನ ಚ್ಯವನ್ರಾಜ್ ಜೆ.ವಿ ಹಾಗೂ ಬಂಟ್ವಾಳ ಪಾಣೆಮಂಗಳೂರಿನ ಸುಕುಮಾರ್ ಅವರು ಕೂಡ ಕಾರ್ಯನಿರ್ವಹಿಸುತ್ತಿದ್ದರು. ಮೆಕ್ಯಾನಿಕಲ್ ಇಂಜಿನಿಯರ್ಗಳಾದ ಅವರು ಸುಮಾರು ಎರಡೂವರೆ ವರ್ಷಗಳಿಂದ ತಮ್ಮ ಕಂಪನಿಯ ಮೂಲಕ ಬಾರ್ಜ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಬದುಕುವ ಆಸೆಯನ್ನೇ ಮರೆತು ಹರಸಾಹಸ
ಮೇ 17ರಂದು ಸಂಜೆ ಸುಮಾರು 4-5 ಗಂಟೆಯ ಸುಮಾರಿಗೆ ಇವರ ಬಾರ್ಜ್ ಮುಳುಗಲು ಆರಂಭಿಸಿತ್ತು. ಆಗ ಇವರು ಜೀವರಕ್ಷಣೆಗಾಗಿ ಸಮುದ್ರಕ್ಕೆ ಹಾರಿದ್ದಾರೆ. ಲೈಫ್ ಜಾಕೆಟ್ ಇದ್ದರೂ, ಅಲೆಗಳ ಅಬ್ಬರಕ್ಕೆ ಸಾಕಷ್ಟು ಬಾರಿ ಮುಳುಗಿ ಬಂದಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಏನೂ ಕಾಣದೆ, ಸಂಪೂರ್ಣ ಕತ್ತಲ ನಡುವೆ ನೀರ ರಾಶಿಯಲ್ಲಿ ಬದುಕುವ ಆಸೆಗಳನ್ನೇ ಮರೆತು ಹರಸಾಹಸ ಪಟ್ಟಿದ್ದಾರೆ.