ಮಂಗಳೂರು:ನಗರದ ಪುರಭವನ, ಬೈಕಂಪಾಡಿ, ಆರ್ಯ ಮರಾಠ ಸಭಾಭವನ, ಕೂಳೂರಿನ ನಾಲ್ಕು ಕಾಳಜಿ ಕೇಂದ್ರಗಳಲ್ಲಿ 185 ನೆರೆ ಸಂತ್ರಸ್ತರಿಗೆ ವ್ಯವಸ್ಥೆ ಕೈಗೊಳ್ಳಲಾಗಿದೆ.
ವಾರದಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ನೇತ್ರಾವತಿ, ಗುರುಪುರ(ಫಲ್ಗುಣಿ) ನದಿಗಳ ಹರಿವಿನಲ್ಲಿ ಭಾರಿ ಏರಿಕೆಯಾಗಿದ್ದು, ತುಂಬಿ ಹರಿಯುತ್ತಿದೆ. ಪರಿಣಾಮ ನದಿಪಾತ್ರದ ಹಲವು ಗ್ರಾಮಗಳು ಸಂಪೂರ್ಣ ಮುಳುಗಡೆ ಹಂತದಲ್ಲಿವೆ. ಆದ್ದರಿಂದ 4 ಕಾಳಜಿ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆದಿದ್ದು, ಅಪಾಯದ ಅಂಚಿನಲ್ಲಿರುವ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.
ಹೊಯ್ಗೆಬಝಾರ್‌ನ 45 ಮಂದಿಯನ್ನೊಳಗೊಂಡ 15 ಕುಟುಂಬಗಳನ್ನು ನಗರದ ಪುರಭವನಕ್ಕೆ ಸ್ಥಳಾಂತರಿಸಲಾಗಿದೆ. ಜೆಪ್ಪಿನಮೊಗರು, ಅತ್ತಾವರದಿಂದ 65 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ. ನಾಲ್ಕು ಕಾಳಜಿ ಕೇಂದ್ರಗಳಲ್ಲಿ ಒಟ್ಟು 185 ಮಂದಿಗೆ ಜಿಲ್ಲಾಡಳಿತದಿಂದ ಆಶ್ರಯ ನೀಡಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ನೆರೆ ಸಂತ್ರಸ್ತರಿಗೆ ಉಪಾಹಾರ, ಊಟ, ಹೊದಿಕೆ ಕಲ್ಪಿಸಲಾಗಿದೆ. ಜೊತೆಗೆ ಸಂತ್ರಸ್ತರಿಗೆ ನಿರಂತರ ಆರೋಗ್ಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.
ಇದಲ್ಲದೆ ಸೋಮೇಶ್ವರದ ಭೋವಿ ಶಾಲೆ, ಸೋಮೇಶ್ವರ ಪುರಸಭೆಯ ಸಭಾಭವನ, ಉಳ್ಳಾಲ ದರ್ಗಾದ ಸಭಾಭವನ, ಸಂತ ಸೆಬಾಸ್ಟಿಯನ್ ಚರ್ಚ್ ಸಭಾಭವನಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.