ಬಂಟ್ವಾಳ(ದಕ್ಷಿಣ ಕನ್ನಡ): ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ 16 ವರ್ಷದ ಪುತ್ರಿಗೂ ಕೊರೊನಾ ಸೋಂಕು ಇರುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ.
ಕೊರೊನಾಕ್ಕೆ ಬಲಿಯಾದ ಮಹಿಳೆಯ ಪುತ್ರಿಗೂ ಪಾಸಿಟಿವ್: ಬಂಟ್ವಾಳದಲ್ಲಿಹೆಚ್ಚಿದ ಭೀತಿ - ಕೊರೊನಾ ಸೋಂಕು
ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ 16 ವರ್ಷದ ಪುತ್ರಿಗೂ ಕೊರೊನಾ ಸೋಂಕು ಇರುವುದಾಗಿ ವರದಿ ದೃಢಪಡಿಸಿದೆ. ಸದ್ಯ ಬಂಟ್ವಾಳ ತಾಲೂಕಿನಲ್ಲೇ 6 ಪ್ರಕರಣಗಳಿದ್ದು, ಬಂಟ್ವಾಳ ಪೇಟೆ ನಿವಾಸಿಗಳನ್ನು ಮತ್ತಷ್ಟು ಆತಂಕಕ್ಕೀಡುಮಾಡಿದೆ.
ಏ.19ರಂದು ಕೊರೊನಾ ಹಿನ್ನೆಲೆ ಮಹಿಳೆ ಮೃತಪಟ್ಟಿದ್ದು, ಅದಾದ ನಾಲ್ಕು ದಿನಗಳ ನಂತರ ಆಕೆಯ ಅತ್ತೆ ಏ.23 ರಂದು ಸಾವನ್ನಪ್ಪಿದ್ದರು. ಇದೀಗ ಮಹಿಳೆಯ ಮಗಳಿಗೂ ಸೋಂಕು ಧೃಡಪಟ್ಟಿದೆ. ಅಷ್ಟೇ ಅಲ್ಲದೇ ಏ.30 ರಂದು ಮೃತಪಟ್ಟ ಮಹಿಳೆಯ ಪಕ್ಕದ ಮನೆ ಹುಡುಗಿಗೂ ಕೊರೊನಾ ಸೋಂಕು ತಗುಲಿದೆ. ಜೊತೆಗೆ ಇವರ ಸಂಬಂಧಿಯೂ ಆಗಿರುವ ಪಕ್ಕದ ಬೀದಿಯ ನಿವಾಸಿ ವೃದ್ಧರೊಬ್ಬರಿಗೂ ಸೋಂಕು ತಗುಲಿದೆ. ಇನ್ನು ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ಮಹಿಳೆಯೊಬ್ಬರು ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಇದು ಬಂಟ್ವಾಳ ಪೇಟೆಯಲ್ಲಿಯೇ 6ನೇ ಪ್ರಕರಣವಾಗಿದ್ದು, ತಾಲೂಕಿನ ಪ್ರಕರಣಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಈಗಾಗಲೇ 3 ಸಾವು ಸಂಭವಿಸಿದ್ದು, 2 ಮಂದಿ ಗುಣಮುಖರಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ 4 ಮಂದಿಯ ಪೈಕಿ 3 ಬಂಟ್ವಾಳ ಮತ್ತು ಒಬ್ಬರು ನರಿಕೊಂಬು ನಾಯಿಲದವರಾಗಿದ್ದಾರೆ.