ಮಂಗಳೂರು ವಿಮಾನ ದುರಂತಕ್ಕೆ 13 ವರ್ಷ.. ಮಂಗಳೂರು: ಮಂಗಳೂರು ವಿಮಾನ ದುರಂತ ಘಟಿಸಿ ಇಂದಿಗೆ 13 ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ಅಗಲಿದವರಿಗೆ ಜಿಲ್ಲಾಡಳಿತದಿಂದ ತಣ್ಣೀರುಬಾವಿಯ ಹುತಾತ್ಮರ ಸ್ಮಾರಕದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್, ಎಡಿಸಿ ಕೃಷ್ಣಮೂರ್ತಿ ಸೇರಿದಂತೆ ಮೊದಲಾದವರು ಪುಷ್ಪ ನಮನ ಸಲ್ಲಿಸಿದರು.
2010 ರ ಮೇ 22ರಂದು ಬೆಳಗ್ಗೆ ದುಬೈನಿಂದ ಬಂದ ಏರ್ ಇಂಡಿಯಾ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ ವೇಯಲ್ಲಿ ನಿಲ್ಲದೇ ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿಯಾಗಿ, ಅದನ್ನು ತುಂಡರಿಸಿ ಆಳ ಪ್ರದೇಶಕ್ಕೆ ಉರುಳಿ ದುರಂತ ಸಂಭವಿಸಿತ್ತು. ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಅಪಘಾತದಲ್ಲಿ 158 ಮಂದಿ ಸಾವನ್ನಪ್ಪಿದ್ದು, 8 ಮಂದಿ ಬದುಕುಳಿದಿದ್ದರು.
ವಿಮಾನ ದುರಂತ ಸಾವನ್ನಪ್ಪಿರುವವರಿಗೆ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಸಾವನ್ನಪ್ಪಿದ 158 ಮಂದಿಯಲ್ಲಿ 12 ಮಂದಿಯ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ಗುರುತು ಪತ್ತೆಯಾಗದವರ ಮೃತದೇಹವನ್ನು ತಣ್ಣೀರು ಬಾವಿಯ ನದಿ ತೀರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಆ ಬಳಿಕ ಇದೇ ಸ್ಥಳದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿತ್ತು. ಇಂದು ಆದೇ ಸ್ಥಳದಲ್ಲಿ ಜಿಲ್ಲಾಡಳಿತದಿಂದ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಘಟನೆ ಸಂಭವಿಸಿ ಇಷ್ಟು ವರ್ಷಗಳಾದರೂ ಮಡಿದ ಕುಟಂಬಗಳಿಗೆ ನ್ಯಾಯಯುತವಾದ ಪರಿಹಾರ ಸಿಕ್ಕಿಲ್ಲ ಎಂಬ ಆರೋಪವಿದೆ. ವಿಮಾನ ಅಪಘಾತದಲ್ಲಿ ಮಡಿದವರಿಗೆ ಸಿಗಬೇಕಿದ್ದ ಪರಿಹಾರದ ಮೊತ್ತ ಸಿಗದೆ ಅನ್ಯಾಯ ಮಾಡಲಾಗುತ್ತಿದೆ. ಕೆಲವರಿಗೆ 35 ಲಕ್ಷ ಪರಿಹಾರ ಸಿಕ್ಕರೆ ಇನ್ನೂ ಕೆಲವು ಬೆರಳೆಣಿಕೆಯ ಸಂತ್ರಸ್ತರಿಗೆ 7 ಕೋಟಿವರೆಗೆ ಪರಿಹಾರ ದೊರೆತಿದೆ. ಸಾವನ್ನಪ್ಪಿದವರ ಪ್ರಾಯ ಮತ್ತು ಅವರು ಆ ಸಂದರ್ಭದಲ್ಲಿ ಗಳಿಸುತ್ತಿದ್ದ ಆದಾಯ ಪರಿಗಣಿಸಿ ಪರಿಹಾರ ನೀಡಲಾಗಿದ್ದರೂ ಅದು ನ್ಯಾಯಯುತವಾಗಿ ನೀಡಲಾಗಿಲ್ಲ ಎಂಬ ಆರೋಪವಿದೆ.
ಅರಣ್ಯದಲ್ಲಿ ಹೊತ್ತಿ ಉರಿದ ವಿಮಾನ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಮಹಿಳೆಯೊಬ್ಬರ ತಂದೆ ಹರಿಶ್ಚಂದ್ರ ಈ ಸಂದರ್ಭದಲ್ಲಿ ಮಾತನಾಡಿ, "ದುಬೈನಿಂದ ಬರುತ್ತಿದ್ದ ಮಗಳನ್ನು ಕರೆದುಕೊಂಡು ಬರಲು ಹೋಗುತ್ತಿದ್ದಾಗ ಅಪಘಾತವಾದ ಸುದ್ದಿ ಬಂತು. ಅದರಲ್ಲಿ ಇದ್ದ ಮಗಳು ಮೃತಪಟ್ಟಿದ್ದಳು. ಆಕೆಯ ಉಂಗುರದ ಮೂಲಕ ಮೃತದೇಹವನ್ನು ಗುರುತು ಹಿಡಿಯಲಾಯಿತು. 13 ವರ್ಷವಾದರೂ ನೆನಪು ಮಾಸಿಲ್ಲ" ಎಂದು ತಿಳಿಸಿದ್ದಾರೆ.
ವಿಮಾನದಲ್ಲಿ 127 ಮಂದಿ ವಯಸ್ಕರು, 19 ಮಕ್ಕಳು, 4 ಶಿಶುಗಳು, 6 ಮಂದಿ ವಿಮಾನ ಸಿಬ್ಬಂದಿಗಳಿದ್ದರು. ಈ ವಿಮಾನದಲ್ಲಿ 166 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನ ದುರಂತ ಸಂದರ್ಭದಲ್ಲಿ 8 ಮಂದಿ ಪಾರಾಗಿದ್ದರು.
ಏನಾಗಿತ್ತು?: ದುಬೈನಿಂದ ರಾತ್ರಿ 1.20 ಕ್ಕೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಹೊರಟಿತ್ತು. ಬೆಳಗ್ಗೆ ಸುರಕ್ಷಿತವಾಗಿ ಮಂಗಳೂರು ತಲುಪಬೇಕಿತ್ತು. ಆದರೆ, ಮಂಗಳೂರಿನ ಹೊರವಲಯದ ಕೆಂಜಾರು ವಿಮಾನ ನಿಲ್ದಾಣ ಲ್ಯಾಂಡ್ ಆಗುವ ಸಂದರ್ಭ ಟೇಬಲ್ ಟಾಪ್ ಲ್ಯಾಂಡಿಂಗ್ನಲ್ಲಿ ಲೆಕ್ಕಾಚಾರ ತಪ್ಪಿ ಸೂಚನಾ ಗೋಪುರಕ್ಕೆ ಡಿಕ್ಕಿ ಹೊಡೆದು ರನ್ ವೇಯಿಂದ ಜಾರಿ ಕಣಿವೆಗೆ ಭಾರಿ ಸದ್ದಿನೊಂದಿಗೆ ಬಿದ್ದಿತ್ತು. ಇಬ್ಭಾಗಗೊಂಡ ವಿಮಾನದಿಂದ ಎಂಟು ಮಂದಿ ಜಿಗಿದು ಪಾರಾಗಿದ್ದರು.
ಮಂಗಳೂರು ವಿಮಾನ ದುರಂತದ ದೃಶ್ಯ ಪಾರಾದವರ ಮಾಹಿತಿ: ಉಳ್ಳಾಲದ ಉಮ್ಮರ್ ಫಾರೂಕ್ (26), ಪುತ್ತೂರಿನ ಅಬ್ದುಲ್ಲಾ (37), ಮಂಗಳೂರಿನಲ್ಲಿ ಕಲಿಯುತ್ತಿದ್ದ ಬಾಂಗ್ಲಾ ವಿದ್ಯಾರ್ಥಿನಿ ಸಬ್ರೀನಾ (23), ಕಾಸರಗೋಡಿನ ಕೃಷ್ಣನ್ (37), ಕೇರಳದ ಕಣ್ಣೂರಿನ ಮಾಹಿನ್ ಕುಟ್ಟಿ (49), ವಾಮಂಜೂರಿನ ಜುಯೆಲ್ ಡಿಸೋಜ (24) ಮಂಗಳೂರಿನ ಮಹಮದ್ ಉಸ್ಮಾನ್ (49), ತಣ್ಣೀರುಬಾವಿಯ ಪ್ರದೀಪ್ (28) ಪಾರಾಗಿದ್ದರು.
ದೊಡ್ಡ ಮೊತ್ತದ ಪರಿಹಾರ:ಈ ಮಧ್ಯೆ ದುರಂತ ಸಂಭವಿಸಿದ ಬಳಿಕ ಸಂತ್ರಸ್ತ ಕುಟುಂಬದವರು ಸಭೆ ಸೇರಿ ಪರಿಹಾರಕ್ಕಾಗಿ ಸಮಿತಿಯೊಂದನ್ನು ರಚಿಸಿಕೊಂಡಿದ್ದರು. ಮುಂಬೈನ ಕಾನೂನು ತಜ್ಞ ಎಚ್.ಡಿ.ನಾನಾವತಿ ನೇತೃತ್ವದಲ್ಲಿ ಮುಲ್ಲಾ ಆಂಡ್ ಮುಲ್ಲಾ ಸಂಸ್ಥೆ ಸಂಪರ್ಕಿಸಿದ್ದರು. ಈ ಸಂಸ್ಥೆ ಬಹುತೇಕ ಕುಟುಂಬಗಳಿಗೆ ಪರಿಹಾರ ಒದಗಿಸಿತ್ತು. ಸಂಸ್ಥೆಯು ಸುಮಾರು 147ರಷ್ಟು ಕುಟುಂಬಗಳಿಗೆ ಪರಿಹಾರ ನೀಡಿದ್ದಾಗಿ ಹೇಳಿಕೊಂಡಿತ್ತು. ಮೃತಪಟ್ಟವರ ಆರ್ಥಿಕ ಆದಾಯ, ಅವರ ವಯಸ್ಸು ಎಲ್ಲವನ್ನೂ ಪರಿಗಣಿಸಿ ನೀಡಲಾಗಿತ್ತು. ಆದ್ರೆ ಈ ಪರಿಹಾರ ವಿತರಣೆ ತೃಪ್ತಿಕರವಾಗಿಲ್ಲ ಎಂದು ಕೆಲವರು ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.