ಮಂಗಳೂರು:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪತ್ಯೇಕ ಪ್ರಕರಣಗಳ ಅಡಿ ಅಕ್ರಮವಾಗಿ ಸಾಗಿಸುತ್ತಿದ್ದ 1,254 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಮೊದಲ ಪ್ರಕರಣದಲ್ಲಿ ಅಕ್ಟೋಬರ್ 9ರಂದು ಎರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX 816 ಮೂಲಕ ಅಬುಧಾಬಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕನನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದ್ದಾರೆ.
ಆತನ ಬಳಿ 1,053 ಗ್ರಾಂ ಚಿನ್ನದ ಪೇಸ್ಟ್ ಪತ್ತೆಯಾಗಿದೆ. ಇದರ ಮೌಲ್ಯ 61.6 ಲಕ್ಷ ರೂಪಾಯಿ ಆಗಿದೆ. ಈತ ನಾಲ್ಕು ಅಂಡಾಕಾರದ ವಸ್ತುಗಳಲ್ಲಿ ಚಿನ್ನವನ್ನು ಇರಿಸಿದ್ದನು. ಆ ನಾಲ್ಕು ವಸ್ತುಗಳನ್ನು ಆತನ ಗುದನಾಳದಲ್ಲಿ ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಾಟ ಮಾಡಿರುವುದು ಪತ್ತೆಯಾಗಿದೆ. ಈ ಪ್ರಕರಣದ ಕುರಿತಂತೆ ತನಿಖೆ ನಡೆಯುತ್ತಿದೆ.
ಎರಡನೇ ಪ್ರಕರಣದಲ್ಲಿ ಅಕ್ಟೋಬರ್ 9 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX384 ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಬ್ಯಾಗ್‌ನಲ್ಲಿ ಹೊದಿಕೆಯೊಳಗೆ ಇರಿಸಲಾದ ಡಬಲ್ ಲೇಯರ್ಡ್ ಬಟ್ಟೆಯಲ್ಲಿ ಬಚ್ಚಿಡಲಾಗಿದ್ದ 201 ಗ್ರಾಂ ಚಿನ್ನದ ಪೇಸ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.
20 ಲಕ್ಷ ಮೌಲ್ಯದ ಚಿನ್ನ ವಶ:ಮತ್ತೊಂದೆಡೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಅಕ್ರಮವಾಗಿ ಚಿನ್ನ ಸಾಗಟ ಮಾಡುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಆ ವ್ಯಕ್ತಿಯಿಂದ 20 ಲಕ್ಷ ಮೌಲ್ಯದ 24 ಕ್ಯಾರೆಟ್ನ 347 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.
ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಕನೋರ್ವ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈ ಸಮಯದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಈತನನ್ನು ಪರಿಶೀಲನೆ ಮಾಡಿದ್ದರು. ಚಿನ್ನವನ್ನು ಬಿಳಿ ಪೌಡರ್ ರೂಪಕ್ಕೆ ಪರಿವರ್ತಿಸಿ 5 ಪ್ಯಾಕೆಟ್‌ಗಳಲ್ಲಿ ತುಂಬಿಸಿ 'ಕಿಚನ್ ಟ್ರೆಸರ್ಸ್' ಹಾಗೂ 'ಕೀರ್‌ಮಿಕ್ಸ್' ಎನ್ನುವ ಲೇಬಲ್ ಹಾಕಿ ಅಕ್ರಮವಾಗಿ ಸಾಗಟ ಮಾಡಿದ್ದು, ಪತ್ತೆಯಾಗಿತ್ತು. ತಕ್ಷಣ ಕಸ್ಟಮ್ಸ್ ಅಧಿಕಾರಿಗಳು ಚಿನ್ನದೊಂದಿಗೆ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದರು.
ಗುದನಾಳದಲ್ಲಿ ಚಿನ್ನ ಸಾಗಟ ಮಾಡಿದ್ದ ಮಹಿಳೆ:ಇತ್ತೀಚೆಗೆ, ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಮಹಿಳೆಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಅಕ್ಟೋಬರ್ 4ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX 814 ಮೂಲಕ ದುಬೈನಿಂದ ಮಂಗಳೂರಿಗೆ ಬಂದಿದ್ದ ಮಹಿಳೆ ಅಕ್ರಮವಾಗಿ ಚಿನ್ನವನ್ನು ಸಾಗಾಟ ಮಾಡಿದ್ದಳು.
ಮಹಿಳೆಯನ್ನು ತಡೆದು ಪರೀಕ್ಷೆ ನಡೆಸಿದಾಗ ಯಂತ್ರದಲ್ಲಿ ಶಬ್ದ ಬಂದಿತ್ತು. ಪರಿಶೀಲನೆ ನಡೆಸಿದಾಗ ಆಕೆಯ ದೇಹದಲ್ಲಿ ಚಿನ್ನ ಇರುವುದು ಗೊತ್ತಾಗಿತ್ತು. ವಿದೇಶದಿಂದ ಬಂದ ಮಹಿಳೆ ತನ್ನ ಗುದನಾಳದಲ್ಲಿ 2 ಗೋಳಾಕಾರದ ವಸ್ತುಗಳನ್ನು ಮುಚ್ಚಿಟ್ಟುಕೊಂಡು ಸಾಗಣೆ ಮಾಡುವುದು ಪತ್ತೆಯಾಗಿತ್ತು. ಮಹಿಳೆಯಿಂದ 349 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಇದರ ಮೌಲ್ಯ ರೂ. 20,41,650 ರೂಪಾಯಿ ಎಂದು ಅಂದಾಜು ಮಾಡಲಾಗಿತ್ತು. ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.
ಇದನ್ನೂ ಓದಿ:ಹಿಂಡಲಗಾ ಜೈಲು ಸ್ಫೋಟಿಸುವುದಾಗಿ ಬೆದರಿಕೆ ಕರೆ: ಆರೋಪಿ ಗುರುತು ಪತ್ತೆ ಹಚ್ಚಿದ ಬೆಳಗಾವಿ ಪೊಲೀಸರು