ದಕ್ಷಿಣ ಕನ್ನಡ: ಎರಡು ವಾರದ ಹಿಂದೆ ನೆಲ್ಯಾಡಿಯ ತುಂಬು ಗರ್ಭಿಣಿ ಸೂಕ್ತ ಚಿಕಿತ್ಸೆ ಸಿಗದೆ ಪರದಾಡಿದ ಘಟನೆಯ ಬೆನ್ನಲ್ಲೇ ಅರೋಗ್ಯ ಇಲಾಖೆಯ ನಿರ್ಲಕ್ಷ್ಯದ ಮತ್ತೊಂದು ಘಟನೆ ವರದಿಯಾಗಿದೆ.
ರಾತ್ರಿ ಹೃದಯಘಾತಕ್ಕೆ ಒಳಗಾದ ವ್ಯಕ್ತಿಯೊಬ್ಬರಿಗೆ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಸಿಗದೆ ಒದ್ದಾಡಿದ ಘಟನೆ ನಡೆದಿದೆ. ಅಲ್ಲದೆ ಕೆಲ ಘಂಟೆಗಳ ಬಳಿಕ ಹಣ ನೀಡಿ ಖಾಸಗಿ ಆಂಬ್ಯುಲೆನ್ಸ್ ಮೂಲಕ ಮಂಗಳೂರು ತಲುಪಿದರೂ, ಚಿಕಿತ್ಸೆ ದೊರಕದೆ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಸಮಯಕ್ಕೆ ಬಾರದ 108 ಆಂಬ್ಯುಲೆನ್ಸ್...ಹಣ ನೀಡಿ ಆಸ್ಪತೆಗೆ ಬಂದರು ಬದುಕುಳಿಯದ ಬಡ ಜೀವ ನೆಲ್ಯಾಡಿ ಕೊಣಾಜೆ ನಿವಾಸಿ ಬಾಬು ಗೌಡ ಎಂಬುವರಿಗೆ ಭಾನುವಾರ ರಾತ್ರಿ 12.30ರ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದ್ದು ಮನೆ ಸದಸ್ಯರು ಅವರನ್ನು ಖಾಸಗಿ ವಾಹನದ ಮೂಲಕ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಹೃದಯಾಘಾತಗೊಂಡಿದ್ದ ಬಾಬು ಅವರಿಗೆ ಇಲ್ಲಿ ಚಿಕಿತ್ಸೆ ನೀಡಲು ಬೇಕಾದಷ್ಟು ಸೌಲಭ್ಯಗಳಿಲ್ಲ, ಮಂಗಳೂರಿಗೆ ಕರೆದುಕೊಂಡು ಹೋಗಿ ಎಂದು ಅವರನ್ನು ಪರೀಕ್ಷಿಸಿದ ವೈದ್ಯರು ಕುಟುಂಬದ ಸದಸ್ಯರಿಗೆ ಸಲಹೆ ನೀಡಿದ್ದಾರೆ.
ವೈದ್ಯರ ಸಲಹೆ ಬಳಿಕ ರೋಗಿಯನ್ನು ಮಂಗಳೂರಿಗೆ ಕರೆದುಕೊಂಡು ಹೋಗಲು ಮನೆಯವರು 108 ಆಂಬ್ಯುಲೆನ್ಸ್ಗೆ ಪ್ರಯತ್ನಿಸಿದ್ದಾರೆ. ಕಡಬ, ನೆಲ್ಯಾಡಿ, ಉಪ್ಪಿನಂಗಡಿ, ಕೊಕ್ಕಡ ಹಾಗೂ ಶಿರಾಡಿ 5 ಕಡೆ ಆಂಬ್ಯುಲೆನ್ಸ್ ಪಡೆಯಲು 108 ನಂಬರಿಗೆ ಕರೆ ಮಾಡಿದ್ದಾರೆ.
ಕಡಬದ ಆಂಬ್ಯುಲೆನ್ಸ್ ಟೈರ್ ಸವೆದು ಹೋಗಿದೆ ಎಂದು ಕರೆ ಸ್ವೀಕರಿಸಿದವರು ತಿಳಿಸಿದ್ದಾರೆ. ನೆಲ್ಯಾಡಿ ಆಂಬ್ಯುಲೆನ್ಸ್ ಬೇರೊಂದು ಕಡೆ ರೋಗಿಯನ್ನು ಕರೆದುಕೊಂಡು ಹೋಗಲು ತೆರಳಿದೆ ಎಂದು ತಿಳಿಸಿದ್ದಾರೆ. ಉಳಿದ ಮೂರು ಕಡೆ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದು, ಮೇಲಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಮೇಲಧಿಕಾರಿಗಳಿಗೆ ಫೋನ್ ಕನೆಕ್ಟ್ ಮಾಡುವಂತೆ ಮನೆಯವರು ವಿನಂತಿಸಿದರೂ, ಫೋನ್ ಕನೆಕ್ಟ್ ಮಾಡಲು ಒಪ್ಪಿಕೊಂಡಿಲ್ಲ. ಅಂತಹ ತುರ್ತು ಸಂದರ್ಭದಲ್ಲೂ ಎರೆಡೆರಡು ಬಾರಿ ಕರೆ ಮಾಡಿ ಗೋಗರೆದರೂ ಆಂಬ್ಯುಲೆನ್ಸ್ ನೀಡಲು ನಿರಾಕರಿಸಿದ್ದಾರೆ. ಸಿಬ್ಬಂದಿಯ ಈ ನಿರ್ಲಕ್ಷ್ಯದಿಂದಾಗಿ ವ್ಯಕ್ತಿ ಅಸುನೀಗಿದ್ದಾನೆ.
ಮೃತರ ಕುಟುಂಬಸ್ಥರು ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಆಂಬ್ಯುಲೆನ್ಸ್ ಸಿಗದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.