ಮಂಗಳೂರು (ದಕ್ಷಿಣ ಕನ್ನಡ) :ಮಾದಕ ವಸ್ತುಗಳ ನಿಗ್ರಹಕ್ಕಾಗಿ ಶ್ರಮಿಸುತ್ತಿರುವ ಮಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 100 ಕೆಜಿ ಡ್ರಗ್ಸ್ ಲೇಪಿತ ಚಾಕೊಲೇಟ್ ವಶಪಡಿಸಿಕೊಂಡಿದ್ದಾರೆ. ವಿಶ್ವಾಸಾರ್ಹ ಮಾಹಿತಿ ಆಧಾರದ ಮೇಲೆ, ಪಾಂಡೇಶ್ವರ ಪೊಲೀಸರು ಬುಧವಾರ ನಗರದ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.
ಕಾರ್ ಸ್ಟ್ರೀಟ್‌ನಲ್ಲಿರುವ ಮನೋಹರ್ ಶೇಟ್ ಮಾಲೀಕತ್ವದ ಅಂಗಡಿ ಮತ್ತು ಫಳ್ನೀರ್‌ನಲ್ಲಿರುವ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ ನಡೆಸುತ್ತಿದ್ದ ಅಂಗಡಿಗಳಿಂದ ಬ್ಯಾಂಗ್ ಚಾಕೊಲೇಟ್ ಎಂದು ಲೇಬಲ್ ಮಾಡಿದ 100 ಕೆಜಿ ಮಾದಕ ವಸ್ತು ಮಿಶ್ರಿತ ಚಾಕೊಲೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಮನೋಹರ್ ಶೇಟ್ ಮತ್ತು ಬೆಚ್ಚನ್ ಸೋಂಕರ್ ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದು, ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ :ಕೊಡಗು ಡ್ರಗ್ಸ್ ಪ್ರಕರಣ: 14 ಟೂರಿಸ್ಟ್ ಹುಡುಗರು ಸೇರಿ 25 ಜನರ ಬಂಧನ!
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಅವರು ಆರೋಪಿಗಳು ಬೇರೆ ಕಡೆಯಿಂದ ಈ ಡ್ರಗ್ಸ್ ಲೇಪಿತ ಚಾಕೊಲೇಟ್ ತಂದು ಮಾರಾಟ ಮಾಡುತ್ತಿರುವ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ. ಡ್ರಗ್ಸ್ ಲೇಪಿತ ಚಾಕೊಲೇಟ್ ಮತ್ತು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಿದ ಚಾಕೊಲೇಟ್‌ಗಳಲ್ಲಿ ನಿರ್ದಿಷ್ಟ ರೀತಿಯ ಮಾದಕ ದ್ರವ್ಯಗಳನ್ನು ಬೆರೆಸಲಾಗಿದೆ ಎಂಬುದನ್ನು ಗುರುತಿಸಲು ಸಂಪೂರ್ಣ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವಿಧಿವಿಜ್ಞಾನ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಭಾರಿ ಪ್ರಮಾಣದ ಅಫೀಮು ವಶ : ಜುಲೈ 6 ರಂದು ಬೆಂಗಳೂರಿನಲ್ಲಿ ನೂತನ ಶೈಲಿಯ ಡ್ರಗ್ಸ್ ಜಾಲದ ಹಿಂದೆ ಬಿದ್ದಿದ್ದ ವಿವಿ ಪುರ ಪೊಲೀಸರು ಭರ್ಜರಿ ಭೇಟೆಯಾಡಿದ್ದರು. ಜ್ಯೂಸ್ ಮಾದರಿಯಲ್ಲಿ ರೆಡಿ ಆಗ್ತಿರುವ ಕಿಕ್ಕೇರಿಸುವ ಡ್ರಗ್ಸ್ ಜಾಲದ ಸದಸ್ಯನೋರ್ವ ಬಂಧಿಸಲಾಗಿತ್ತು. ರಾಜಸ್ಥಾನ ಮೂಲದ ಗುನಾಂ ಸಿಂಗ್ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಆರೋಪಿಯ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು 55 ಕೆಜಿ ತೂಕದ 60 ಲಕ್ಷದ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಚುರುಕುಗೊಳಿಸಿದ್ದಾರೆ.
ಈ ಮಾದಕ ಪದಾರ್ಥ ಒಂದು ಅಫೀಮು ಸಸ್ಯ. ಇದನ್ನು ಹೆಚ್ಚಾಗಿ ರಾಜಸ್ಥಾನದಲ್ಲಿ ಬೆಳೆಯಲಾಗುತ್ತದೆ. ಇದರಿಂದ ಅಫೀಮು (ಡ್ರಗ್ಸ್) ತಯಾರು ಮಾಡಿ ಪಾರ್ಟಿ ಹಾಗೂ ಮೋಜು ಮಸ್ತಿ ಕೂಟಗಳಲ್ಲಿ ಯುವ ಜನತೆಗೆ ಮಾರಾಟ ಮಾಡುತ್ತಿದ್ದ. ಜೊತೆಗೆ ಇದನ್ನು ಲಕ್ಷ ಲಕ್ಷ ಬೆಲೆಗೆ ಮಾರಾಟ ಮಾಡುವುದರ ಜೊತೆಗೆ ದೇಶದ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಿ ಕೋಟಿ ಕೋಟಿ ವ್ಯವಹಾರ ನಡೆಸಲಾಗುತ್ತದೆ.
ಇದನ್ನೂ ಓದಿ :Bengaluru crime: ಜ್ಯೂಸ್, ನೀರಿನಲ್ಲಿ ಬೆರೆಸಿ ಕುಡಿದರೆ ನಶೆ.. ಬೆಂಗಳೂರಿನಲ್ಲಿ ಹೊಸ ಡ್ರಗ್ಸ್ ಜಾಲ ಭೇದಿಸಿದ ಪೊಲೀಸರು