ಮಂಗಳೂರು :ನಗರದಲ್ಲಿ ಕೋವಿಡ್-19 ಸೋಂಕು ಪೀಡಿತ ಹತ್ತು ತಿಂಗಳ ಹಸುಗೂಸಿಗೆ ಚಿಕಿತ್ಸೆ ಸಂಪೂರ್ಣಗೊಂಡು ಗುಣಮುಖವಾಗಿ ಮನೆಗೆ ತೆರಳಿದೆ. ಹತ್ತು ತಿಂಗಳ ಹಸುಗೂಸಿಗೆ ಸೋಂಕು ತಗುಲಿರೋದರಿಂದ ಈ ಸಂದರ್ಭ ಮಗುವಿಗೆ ಚಿಕಿತ್ಸೆ ನೀಡೋದು ವೈದ್ಯರಿಗೆ ಬಹು ಸವಾಲಿನ ಕೆಲಸವಾಗಿತ್ತು. ಈ ಬಗ್ಗೆ ವೈದ್ಯಾಧಿಕಾರಿ ಸವಿವರವಾಗಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ವೈದ್ಯಾಧಿಕಾರಿ ಡಾ.ರಾಜೇಶ್ ಮಾಹಿತಿ ನೀಡಿ, ಬಂಟ್ವಾಳ ಸಮೀಪದ ಸಜೀಪನಡು ಗ್ರಾಮದ 10 ತಿಂಗಳ ಮಗುವೊಂದನ್ನು ಮಾರ್ಚ್ 21ರಂದು ಜ್ವರ ಹಾಗೂ ಹೊಟ್ಟೆ ಉಬ್ಬರಿಕೆ ಎಂದು ಹೇಳಿ ಮಗುವಿನ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮಗುವಿನಲ್ಲಿ ಕೋವಿಡ್-19 ಶಂಕೆ ವ್ಯಕ್ತವಾಗಿದ್ರಿಂದ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಮಗುವಿನ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಿದಾಗ ಮಗುವಿಗೆ ಕೋವಿಡ್-19 ಸೋಂಕು ತಗುಲಿರೋದು ದೃಢವಾಗುತ್ತದೆ. ಆ ಬಳಿಕ ಮಗುವಿಗೆ ಚಿಕಿತ್ಸೆ ಆರಂಭವಾಗುತ್ತದೆ. ತಂದೆ, ತಾಯಿಯೊಂದಿಗೆ ಕೇರಳಕ್ಕೆ ಹೋಗಿದ್ದ ಸಂದರ್ಭ ಕೋವಿಡ್ -19 ಸೋಂಕು ತಗುಲಿತ್ತು ಎಂದು ಆ ಬಳಿಕ ತಿಳಿದು ಬಂದಿರುತ್ತದೆ ಎಂದು ಹೇಳಿದರು.
ಮಗುವಿನಲ್ಲಿ ಕೋವಿಡ್-19 ಸೋಂಕು ಪತ್ತೆಯಾದ ಬಳಿಕ ಆಸ್ಪತ್ರೆಯಲ್ಲಿ ವಿಶೇಷ ನಿಗಾ ವ್ಯವಸ್ಥೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಮಗುವಿಗೆ ತಾಯಿಯ ಬೆಚ್ಚಗಿನ ಅಪ್ಪುಗೆ ಬೇಕು. ಎದೆ ಹಾಲು ಬೇಕು. ಆದರೆ, ಕೋವಿಡ್-19 ಸೋಂಕಿತರು ಮತ್ತೊಬ್ಬರನ್ನು ಸಂಧಿಸುವಂತಿಲ್ಲ. ಮಗುವಾದರೂ ತಾಯಿಯಿಂದ ಸಾಮಾಜಿಕ ಅಂತರ ಕಾಯಲೇಬೇಕು. ವೈದ್ಯರಿಗೆ ಇದು ಕಠಿಣ ಸವಾಲಾಗಿತ್ತು.
ಆದರೆ, ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿಗೆ ತಾಯಿಯ ಎದೆ ಹಾಲಿನಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ಕಾರಣಕ್ಕೆ ವೈದ್ಯರು ಹಾಲುಣಿಸಲು ಮಗುವಿನ ತಾಯಿಗೆ ಅನುಮತಿ ನೀಡುತ್ತಾರೆ. ಅಲ್ಲದೆ ಮಗುವಿನ ಆರೈಕೆಗೆ ಐಸೋಲೇಷನ್ ವಾರ್ಡ್‌ನಲ್ಲಿ ತಾಯಿ ಹಾಗೂ ಅಜ್ಜಿಗೆ ಅನುಮತಿ ನೀಡಲಾಗುತ್ತದೆ. ಆದರೆ, ಐಸೋಲೇಷನ್ ವಾರ್ಡ್‌ಗೆ ತೆರಳುವಾಗ ಕಡ್ಡಾಯವಾಗಿ ಪಿಪಿಟಿ ಕಿಟ್ ಧರಿಸುವ ವ್ಯವಸ್ಥೆಯನ್ನು ಮಾಡುವಂತೆ ವೈದ್ಯರು ಸೂಚಿಸುತ್ತಾರೆ. ಇನ್ನು ಸರಿಯಾದ ಚಿಕಿತ್ಸಾ ವ್ಯವಸ್ಥೆ ನಡೆದ ಬಳಿಕ ಇದೀಗ ಮಗು ಸಂಪೂರ್ಣ ಗುಣಮುಖವಾಗುತ್ತದೆ.
ಅಲ್ಲದೆ ಸಂತಸದ ಸಂಗತಿಯೆಂದರೆ ನಿರಂತರವಾಗಿ ತಾಯಿ ಹಾಗೂ ಅಜ್ಜಿ ಮಗುವಿನ ಸಂಪರ್ಕದಲ್ಲಿರೋದರಿಂದ ಅವರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗುತ್ತದೆ. ವೈದ್ಯರು ಹೇಳಿರುವ ಎಲ್ಲಾ ಸೂಚನೆಗಳನ್ನು ಚಾಚೂ ತಪ್ಪದೆ ಮಗುವಿನ ಆರೈಕೆ ಮಾಡುತ್ತಿರುವುದರಿಂದ ತಾಯಿ ಹಾಗೂ ಅಜ್ಜಿಗೆ ಕೋವಿಡ್-19 ಸೋಂಕು ತಗುಲಲಿಲ್ಲ. ಇದು ವೈದ್ಯ ಲೋಕದ ಸವಾಲೂ ಹೌದು ಎಂದು ವೈದ್ಯಾಧಿಕಾರಿ ಡಾ.ರಾಜೇಶ್ ಹೇಳಿದರು.