ಕರ್ನಾಟಕ

karnataka

ETV Bharat / state

ಬ್ರಿಡ್ಜ್ ಕಂ ಬ್ಯಾರೇಜ್: ಬಂಟ್ವಾಳ ತಾಲೂಕಿನಲ್ಲಿ 1 ಕೋಟಿ ರೂ. ವೆಚ್ಚದ ವೆಂಟೆಡ್ ಡ್ಯಾಂ - ented dam

ಬಂಟ್ವಾಳ ತಾಲೂಕಿನ ಸಜೀಪಮೂಡ-ಅಮ್ಟೂರು ಗ್ರಾಮವನ್ನು ಬೆಸೆಯುವ ಕಿಂಡಿ ಅಣೆಕಟ್ಟೊಂದು ಸಿದ್ಧಗೊಂಡಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ.

Bantwal
ಬಂಟ್ವಾಳ ತಾಲೂಕಿನಲ್ಲಿ 1 ಕೋಟಿ ರೂ. ವೆಚ್ಚದ ವೆಂಟೆಡ್ ಡ್ಯಾಂ..

By

Published : Sep 9, 2020, 12:25 PM IST

ಬಂಟ್ವಾಳ: ಗ್ರಾಮಗಳ ಸಂಪರ್ಕ ಕೊಂಡಿ ಬೆಸೆಯುವ ಜೊತೆಗೆ ರೈತರಿಗೆ ನೀರಾವರಿಯನ್ನೂ ಒದಗಿಸುವ ದೃಷ್ಟಿಯಿಂದ ಸರ್ಕಾರ ಬ್ರಿಡ್ಜ್ ಕಂ ಬ್ಯಾರೇಜ್​​ಗಳನ್ನು ನಿರ್ಮಿಸುತ್ತಿದೆ. ಬಂಟ್ವಾಳ ತಾಲೂಕಿನ ಸಜೀಪಮೂಡ-ಅಮ್ಟೂರು ಗ್ರಾಮವನ್ನು ಬೆಸೆಯುವ ಕಿಂಡಿ ಅಣೆಕಟ್ಟೊಂದು ಸಿದ್ಧಗೊಂಡಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳುವ ಮೂಲಕ ಜನತೆಗೆ ನೆರವಾಗಲಿದೆ.

ಬಂಟ್ವಾಳ ತಾಲೂಕಿನಲ್ಲಿ 1 ಕೋಟಿ ರೂ. ವೆಚ್ಚದ ವೆಂಟೆಡ್ ಡ್ಯಾಂ..

ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದ್ದು, ಜನರ ಸಂಪರ್ಕದ ಜೊತೆಗೆ ನೀರಿನ ಬಳಕೆಗೂ ಅನುಕೂಲವಾಗಲಿದೆ. ಇದಕ್ಕೆ ನೀರನ್ನು ತಡೆಯಲು ಮರದ ಹಲಗೆಯ ಬದಲು ಎಫ್ಆರ್​ಪಿ ಪ್ಲಾಂಕ್ಸ್​​​​ಗಳನ್ನು ಅಳವಡಿಸಲಾಗುತ್ತದೆ. ಜೊತೆಗೆ ನೀರು ಬಳಕೆದಾರರ ಸಂಘದ ಮೂಲಕ ರೈತರೇ ಅದನ್ನು ಅಳವಡಿಸುವ ಕಾರ್ಯ ನಿರ್ವಹಿಸಲಿದ್ದು, ಅದರ ಖರ್ಚನ್ನು ಇಲಾಖೆ ನೀಡುತ್ತದೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು.

ಮಾರ್ನಬೈಲ್​ನಿಂದ ಪಣೋಲಿಬೈಲ್ ರಸ್ತೆಯಲ್ಲಿ ಸಾಗಿ ಎಡಕ್ಕೆ ಚಲಿಸಿದಾಗ ಎದುರಾಗುತ್ತಿದ್ದ ತೋಡಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು, ಲಘು ವಾಹನ ಸಂಚಾರಕ್ಕೂ ಅನುಕೂಲವಾಗಲಿದೆ. ಸೇತುವೆಯ ಎರಡೂ ಭಾಗಗಳಲ್ಲಿ ರಸ್ತೆಯ ತೊಂದರೆ ಇದ್ದರೂ ಸುತ್ತು ಬಳಸಿ ಸಾಗುವ ಬದಲು ಕಾಲ್ನಡಿಗೆಯಲ್ಲಿ ಸಾಗುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಸ್ವಲ್ಪ ಸಮಯದಲ್ಲಿ ಕಿಂಡಿ ಅಣೆಕಟ್ಟು ಉದ್ಘಾಟನೆಗೊಂಡರೂ ಮಳೆ ಪೂರ್ತಿ ಕಡಿಮೆಯಾದ ಬಳಿಕ ಅಂದರೆ ನವೆಂಬರ್-ಡಿಸೆಂಬರ್ ಸಮಯದಲ್ಲಿ ಹಲಗೆ ಹಾಕುವ ಕಾರ್ಯ ನಿರ್ವಹಿಸಲಾಗುತ್ತದೆ.

ಇಲ್ಲಿ ಕೃಷಿಕರಿಗೆ ನೀರಿನ ಬಳಕೆಯ ಅವಕಾಶದ ಜೊತೆಗೆ ಅಂತರ್ಜಲ ವೃದ್ಧಿಗೆ ನೆರವಾಗಲಿದೆ. ತೋಟಕ್ಕೆ ನೀರಿನ ಅಂಶ ಸಿಗುವ ಜತೆಗೆ ಕೆರೆ, ಬಾವಿ, ಕೊಳವೆ ಬಾವಿಗಳಲ್ಲಿ ನೀರಿನ ವೃದ್ಧಿಗೂ ಅನುಕೂಲವಾಗಲಿದೆ. ನೀರು ಬಳಕೆದಾರರ ಸಂಘ ಕಿಂಡಿ ಅಣೆಕಟ್ಟು ನಿರ್ಮಾಣವಾದ ಪ್ರಥಮ ವರ್ಷದಲ್ಲಿ ಅದರ ಗುತ್ತಿಗೆ ನಿರ್ವಹಣೆ ಮಾಡಿದವರೇ ಹಲಗೆ ಹಾಕುವ ಕೆಲಸ ನಿರ್ವಹಿಸುತ್ತಾರೆ. ಆದರೆ ಪ್ರತೀ ಮಳೆಗಾಲದ ಪ್ರಾರಂಭದಲ್ಲಿ ಹಲಗೆ ತೆಗೆದು ಬಳಿಕ ಮಳೆ ಕಡಿಮೆಯಾದಾಗ ಹಾಕಬೇಕಾಗುತ್ತದೆ. ಹೀಗಿರುವಾಗ ರೈತರೇ ಮಳೆಗಾಲ ಪ್ರಾರಂಭದಲ್ಲಿ ಹಲಗೆ ತೆಗೆದು ತಮಗೆ ಬೇಕಾದಾಗ ಅಳವಡಿಸುವ ದೃಷ್ಟಿಯಿಂದ ಸ್ಥಳೀಯವಾಗಿ ನೀರು ಬಳಕೆದಾರರ ಸಂಘದ ಮೂಲಕ ಅದರ ಕಾಮಗಾರಿ ನಿರ್ವಹಿಸಲಾಗುತ್ತದೆ. ಅದಕ್ಕೆ ಬೇಕಾದ ಖರ್ಚನ್ನು ಸಣ್ಣ ನೀರಾವರಿ ಇಲಾಖೆಯ ಮೂಲಕವೇ ಭರಿಸಲಾಗುತ್ತದೆ. ಸುಮಾರು 27.10 ಮೀಟರ್ ಅಗಲದ ತೋಡಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು, 3.25 ಮೀ. ಎತ್ತರದಲ್ಲಿ ಪಿಲ್ಲರ್​​ ಅಳವಡಿಕೆ ಮೂಲಕ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಪ್ರಸ್ತಾವನೆಯಂತೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಈ ಕಿಂಡಿ ಅಣೆಕಟ್ಟು ಸಿದ್ಧಗೊಂಡಿದೆ. ಈಗಾಗಲೇ ಇದರ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಅಮ್ಟೂರು ಭಾಗದ ಕೃಷ್ಣಾಪುರ ಪ್ರದೇಶದ ನಿವಾಸಿಗಳಿಗೆ ಸಂಪರ್ಕ ಕಲ್ಪಿಸುವ ಜೊತೆಗೆ ಸ್ಥಳೀಯ ರೈತರಿಗೆ ನೀರಾವರಿಯ ಅವಕಾಶ ಒದಗಿಸಲಿದೆ ಎಂದು ಸ್ಥಳೀಯ ಮುಖಂಡ, ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details