ಚಿತ್ರದುರ್ಗ :ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಯಿತು.
ಒಟ್ಟು 37 ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರು ಸಭೆಯಲ್ಲಿದ್ದರು. ಸಭೆಯಲ್ಲಿ ಪ್ರಮುಖವಾಗಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳು ಹಾಗೂ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿಯಾಗಿರುವ ಇಂಜಿನಿಯರ್ಗಳ ನೇಮಕಾತಿಯಲ್ಲಿ ಲೋಪವಾಗಿದೆ ಎಂದು ಕೆಲ ಸದಸ್ಯರು ಸಭೆಯಲ್ಲಿ ಧ್ವನಿ ಎತ್ತಿದ್ದರು.
ಇನ್ನು ಕೆಲವರು ಗ್ರಾಮೀಣ ಅಭಿವೃದ್ಧಿಗೆ ಪೂರಕದ ಯೋಜನೆಯ ಲೋಪಗಳನ್ನು ಹಿಡಿದರೆ, ಇತ್ತ ಅಧಿಕಾರಿಗಳು ಗುತ್ತಿಗೆ ಆಧಾರದ ನೇಮಕಾತಿಯ ಅಂಕಿ-ಅಂಶಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯರು ಆಕ್ರೋಶ ಹೊರ ಹಾಕಿದರು.
ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಬಳಿಕ ಇವೆಲ್ಲವುಗಳಿಗೆ ಉತ್ತರಿಸಿದ ಜಿಪಂ ಅಧ್ಯಕ್ಷೆ ಶಶಿಕಲಾ, ಈಗಾಗಲೇ ತಾವೆಲ್ಲ ಸದಸ್ಯರು ನನ್ನ ಗಮನಕ್ಕೆ ತಂದಿದ್ದೀರಿ, ಈ ಕುರಿತಾಗಿ ಸಮಗ್ರವಾಗಿ ಪರಿಶೀಲನೆ ನಡೆಸುವುದಾಗಿ ಆಶ್ವಾಸನೆ ನೀಡಿದರು.
ಕೈಕೊಟ್ಟ ಕರೆಂಟ್ :ಜಿಪಂ ಸಾಮಾನ್ಯ ಸಭೆಗೆ ವಿದ್ಯುತ್ ಕಂಟಕವಾಯಿತು. ಸಭೆ ಮಧ್ಯದಲ್ಲಿ ಏಕಾಏಕಿ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಕೆಲವು ಸದಸ್ಯರು ಅಧಿಕಾರಿಗಳ ವಿರುದ್ಧ ಸಿಡಿದೆದ್ದರು. ಇನ್ನು, ವಿದ್ಯುತ್ ಸಂಪರ್ಕ ಕಡಿತಗೊಂಡು 20 ನಿಮಿಷಗಳಾದರೂ ಕರೆಂಟ್ ಬಾರದೆ ಇತ್ತ ಕೆಲವು ಸದಸ್ಯರು ಸಭೆಯಿಂದ ಹೊರ ನಡೆಯಲು ಆರಂಭಿಸಿದರು. ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಊಟದ ವಿರಾಮ ನೀಡಲಾಯಿತು.
ಸಮಗ್ರ ಅಭಿವೃದ್ಧಿಯ ಚರ್ಚೆ ಕೊರತೆ :ಇಂದು ನಡೆದ ಜಿಪಂ ಸಾಮಾನ್ಯ ಸಭೆ ಕೇವಲ ಕಾಟಾಚಾರಕ್ಕೆ ನಡೆಸಿದಂತಾಗಿತ್ತು. ಇಡೀ ಸಭೆ ಆರೋಪ-ಪ್ರತ್ಯಾರೋಪಗಳ ನಡುವೆಯೇ ಮುಳುಗಿತ್ತು. ಮುಂದಾಗಬೇಕಾದ ಅಭಿವೃದ್ಧಿ ಕಾಮಗಾರಿಗಳನ್ನು ಸಮಗ್ರವಾಗಿ ಚರ್ಚಿಸದೆ. ಕೇವಲ ಕಾಟಾಚಾರಕ್ಕೆ ಎಂಬಂತೆ ಸಭೆ ನಡೆಸಲಾಯಿತು.