ಚಿತ್ರದುರ್ಗ: ಈಜಲು ಹೋದ ಯುವಕ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿಯ ಗಾಯತ್ರಿ ಜಲಾಶಯದಲ್ಲಿ ನಡೆದಿದೆ.
ಮೃತ ಯುವಕನನ್ನು ಹಿರಿಯೂರು ತಾಲೂಕಿನ ಜೆಜೆಹಳ್ಳಿಯ ಕೆ.ಹೆಚ್. ರಂಗನಾಥ್ ಬಡಾವಣೆಯ ಸಲ್ಮಾನ್ (24) ಎಂದು ಗುರುತಿಸಲಾಗಿದೆ. ಗಾಯತ್ರಿ ಜಲಾಶಯ 2017ರ ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಎರಡು ಬಾರಿ ತುಂಬಿ ಕೋಡಿ ಬಿದ್ದಿತ್ತು.
ನಂತರ 4 ವರ್ಷಗಳ ಬಳಿಕ ಡ್ಯಾಂ ತುಂಬಿ ನಿನ್ನೆಯಷ್ಟೇ ಕೋಡಿ ಬಿದ್ದು ಹರಿಯುತ್ತಿತ್ತು. ಜಲಾಶಯ ನೋಡಲು ಹೋದ ಯುವಕ ಕೋಡಿ ಬಿದ್ದ ನೀರಿನಲ್ಲಿ ಈಜಲು ಹೋಗಿದ್ದಾನೆ. ನೀರು ರಭಸವಾಗಿ ಹರಿಯುತ್ತಿದ್ದರಿಂದ ನೀರಿನ ಸೆಳೆತಕ್ಕೆ ಯುವಕ ಕಣ್ಮರೆಯಾಗಿ ಮೃತಪಟ್ಟಿದ್ದಾನೆ.
ವಿಷಯ ತಿಳಿದ ತಕ್ಷಣ ಪಿಎಸ್ಐ ಡಿಜೆ ಪರಮೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆದಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಜಲಾಶಯಕ್ಕೆ ಪ್ರವಾಸಿಗರ ದಂಡು :ನಾಲ್ಕು ವರ್ಷಗಳ ಬಳಿಕ ಜಲಾಶಯ ಮೈದುಂಬಿ ಕೋಡಿ ಬಿದ್ದು ಹರಿಯುತ್ತಿದೆ. ರಜೆ ದಿನವಾದ ಇಂದು ಜಲಾಶಯ ನೋಡಿ ಕಣ್ತುಂಬಿಕೊಳ್ಳಲು ದೂರದಿಂದ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಡ್ಯಾಂ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಕಣ್ತಪ್ಪಿಸಿ ಯುವಕ ನೀರಿನಲ್ಲಿ ಈಜಲು ಹೋಗಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ:ಮುಖಾಮುಖಿ ಡಿಕ್ಕಿಯಾಗಿ ಹೊತ್ತಿ ಉರಿದ 2 ಲಾರಿ.. ಮೂವರು ಸಜೀವ ದಹನ ಶಂಕೆ!