ಕರ್ನಾಟಕ

karnataka

ETV Bharat / state

ನಾಪತ್ತೆ ಕೇಸ್​ ಬೆನ್ನಟ್ಟಿ ಹೋದ್ರೆ ಬಯಲಾಯ್ತು ಕೊಲೆ ಪ್ರಕರಣ: ಪೊಲೀಸರಿಗೆ ಬುರ್ಕಾ ನೀಡಿತು ಹತ್ಯೆ ಸುಳಿವು! - undefined

ಚಿತ್ರದುರ್ಗ ಜಿಲ್ಲಾ ಪೊಲೀಸರು ಕೊಲೆ ಪ್ರಕರಣವೊಂದನ್ನು ಭೇದಿಸಿದ್ದಾರೆ. ಕೊಲೆಯಾದ ಮಹಿಳೆಯ ಬುರ್ಕಾದ ಜಾಡು ಹಿಡಿದು ಹತ್ಯೆಯ ಆರೋಪಿಗಳ ಹೆಡೆಮುರಿ ಕಟ್ಟಿರುವ ಘಟನೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ರೇಷ್ಮಾ

By

Published : May 12, 2019, 6:02 PM IST

ಚಿತ್ರದುರ್ಗ: ಜಗಳದಿಂದ ಬೇಸತ್ತ ಪತಿ ತನ್ನ ಮಡದಿಯನ್ನು ಕೊಲೆ ಮಾಡಿ ಬಿಸಾಡಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿ ನಡೆದಿದೆ. ಅನುಮಾನಗೊಂಡ ಪೊಲೀಸರು ಶವದ ಮೇಲಿದ್ದ ಬುರ್ಕಾದ ಜಾಡು ಹಿಡಿದು ಕೊಲೆ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಮೇ 05 ರಂದು ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಗಿಡ್ಡೋಬನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರ ಸರ್ವೀಸ್ ರಸ್ತೆ ಪಕ್ಕದಲ್ಲಿ ಮಹಿಳೆವೋರ್ವಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶವ ಸಿಕ್ಕ ಸ್ಥಿತಿಯನ್ನು ಆಧರಿಸಿ ಪರಿಶೀಲಿಸಿದಾಗ ಕೊಲೆ ನಡೆದು ಸುಮಾರು 15 ದಿನಗಳು ಕಳೆದಿರಬಹುದು ಎಂಬ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಮೃತದೇಹದ ಮೇಲಿದ್ದ ಬುರ್ಕಾ ನೋಡಿ, ಇದು ಯಾವುದೋ ಮುಸ್ಲಿಂ ಮಹಿಳೆಯ ಶವ ಎಂಬುದನ್ನು ಖಚಿತಪಡಿಸಿಕೊಂಡು ತನಿಖೆ ಆರಂಭಿಸಿದ್ದರು.

ಬುರ್ಕಾದ ಜಾಡು ಹಿಡಿದ ಪೊಲೀಸರು

ಹೀಗೆ ಪ್ರಕರಣದ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ಹಿರಿಯೂರು ಪೊಲೀಸ್ ಠಾಣೆಯಲ್ಲಿ ರೇಷ್ಮಾ ಎಂಬ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಎಪ್ರಿಲ್ 29ರಂದು ನಾಪತ್ತೆ ಕೇಸ್ ದಾಖಲಾಗಿರುವುದು ತಿಳಿದುಬಂದಿತ್ತು. ನಂತರ ಮಿಸ್ಸಿಂಗ್ ಕೇಸ್ ದಾಖಲಾಗಿದ್ದ ಮಹಿಳೆಯ ಬಗ್ಗೆ ವಿಚಾರಿಸಿದಾಗ ಆಕೆ ಹೊಸದುರ್ಗ ತಾಲೂಕಿನ ಮತ್ತೋಡು ಗ್ರಾಮದ ನಿವಾಸಿ ಅನ್ನೋದು ಗೊತ್ತಾಗಿತ್ತು. ಎರಡು ವರ್ಷಗಳ‌ ಹಿಂದೆ ಹಿರಿಯೂರಿನ ಹರಿಶ್ಚಂದ್ರ ಘಾಟ್ ಬಡಾವಣೆ ನಿವಾಸಿ ಇಬ್ರಾಹಿಂ ಕಲೀಲ್ ಜೊತೆ ಮಹಿಳೆಗೆ ವಿವಾಹವಾಗಿತ್ತು. ಆದರೆ ದಂಪತಿ ನಡುವೆ ನಿರಂತರವಾಗಿ ಜಗಳ ಆಗುತ್ತಿತ್ತು‌ ಎಂಬುದು ತಿಳಿದುಬಂದಿದೆ.

ರೇಷ್ಮಾಳ ಪತಿಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ವಿಚಾರಣೆಯನ್ನು ತೀವ್ರಗೊಳಿಸಿದ್ದ ಪೊಲೀಸರು ಇಬ್ರಾಹಿಂನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಎಪ್ರಿಲ್ 26ರಂದು ದಂಪತಿ ನಡುವಿನ‌ ಜಗಳ ತಾರಕಕ್ಕೇರಿದಾಗ ಮನನೊಂದ ರೇಷ್ಮಾ ಮನೆ ಬಿಟ್ಟು ಹೋಗಿದ್ದಳು. ಆದರೆ, ಆಕೆಯ ಬೆನ್ನತ್ತಿ ಹೋಗಿದ್ದ ಇಬ್ರಾಹಿಂ ಮತ್ತವನ ಸಹೋದರ ಸಾದಿಕ್ ಆಕೆಯನ್ನು ಮನವೊಲಿಸಿ ವಾಪಸ್ ಮನೆಗೆ ಕರೆತಂದಿದ್ದರು. ಅದೇ ದಿನ ಇಬ್ರಾಹಿಂ ತಂದೆ ಮೊಯಿನುದ್ದೀನ್, ತಾಯಿ ಮುನಿರಾ ಹಾಗೂ ತಮ್ಮನ ಹೆಂಡತಿ ಯಾಸ್ಮಿನ್ ಜೊತೆ ಸೇರಿ ರೇಷ್ಮಾಳನ್ನು ಕೊಲೆ ಮಾಡಿದ್ದಾರೆ. ನಂತರ ರೇಷ್ಮಾಳ ಶವವನ್ನು ಗೋಣಿ ಚೀಲದಲ್ಲಿ ಹಾಕಿ, ಬಾಡಿಗೆ ವಾಹನದ ಮೂಲಕ ಶವವನ್ನು ಗಿಡ್ಡೋಬನಹಳ್ಳಿ ಸಮೀಪದ ಸರ್ವೀಸ್ ರಸ್ತೆಯ ಸೇತುವೆ ಕೆಳಗೆ ಎಸೆದಿದ್ದರಂತೆ.

ಆರೋಪಿಗಳು

ಇದಕ್ಕೂ ಮೊದಲು ರೇಷ್ಮಾಳ ತಾಯಿಯ ಬಳಿ ತೆರಳಿದ್ದ ಇಬ್ರಾಹಿಂ ನಿಮ್ಮ ಮಗಳು ಮನೆ ಬಿಟ್ಟು ಹೋಗಿದ್ದಾಳೆ ಎಂದು ಸುಳ್ಳು ಮಾಹಿತಿ ನೀಡಿದ್ದನಂತೆ. ಇಬ್ರಾಹಿಂ ಮಾತನ್ನ ನಂಬಿ ಮೂರು ದಿನಗಳ ಕಾಲ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದ ರೇಷ್ಮಾಳ ತಾಯಿ ಮಮ್ತಾಜ್ ಏಪ್ರಿಲ್ 29ರಂದು ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು.

ಈಗಾಗಲೇ ಕೊಲೆ ಪ್ರಕರಣ ಭೇದಿಸಿರುವ ಐಮಂಗಲ ಠಾಣೆ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೆ ಅಸಲಿ ಕಾರಣ ಏನು? ಯಾರೆಲ್ಲಾ ಈ ಪ್ರಕರಣದಲ್ಲಿ ಕೈಜೋಡಿಸಿರಬಹುದು ಎಂಬುದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ತನಿಖೆ ನಂತರವಷ್ಟೇ ಮತ್ತಷ್ಟು ಮಾಹಿತಿ ಹೊರಬೀಳಲಿದೆ.

For All Latest Updates

TAGGED:

ABOUT THE AUTHOR

...view details