ಚಿತ್ರದುರ್ಗ:ಬಿಜೆಪಿಯವರು ಕೊರೊನಾ ವೈರಸ್ಗೆ ನೀಡುವ ಲಸಿಕೆಯಲ್ಲಿಯೂ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಇದುವರೆಗೆ ತಯಾರಾಗಿರದ ಲಸಿಕೆಯನ್ನು ಅದು ಹೇಗೆ ಬಿಹಾರ ಜನತೆಗೆ ಉಚಿತವಾಗಿ ನೀಡ್ತಾರೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ನಾಯಕರನ್ನು ಕೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವ್ಯಾಕ್ಸಿನ್ ಬಿಹಾರಕ್ಕೆ ಮಾತ್ರ ಏಕೆ ಕೊಡ್ಬೇಕು?, ಇಡೀ ದೇಶಕ್ಕೆ ಉಚಿತವಾಗಿ ನೀಡಲಿ. ನಮ್ಮ ದೇಶಕ್ಕೆ ಕೊರೊನಾ ಬಂದಿರುವುದು ವಿದೇಶದಿಂದ. ಇದಕ್ಕೆ ಕಾರಣ ಮೋದಿ ಹೊರತು ಜನರಲ್ಲ. ದೇಶವಾಸಿಗಳು ಸೋಂಕಿನಿಂದ ನರಳಾಡಲು ಮೋದಿ ಕಾರಣರಾಗಿದ್ದು, ದೇಶದ ಎಪ್ಪತ್ತರಿಂದ ಎಂಬತ್ತು ಲಕ್ಷ ಜನರ ಶಾಪ ಅವರಿಗೆ ತಟ್ಟುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಹಾರದಲ್ಲಿ ಉಚಿತವಾಗಿ ಲಸಿಕೆ ನೀಡುತ್ತೇವೆ ಎಂದು ಹೇಳಿರುವುದು ಒಂದು ಚುನಾವಣೆಯ ಗಿಮಿಕ್ ಅಷ್ಟೇ. ಲಸಿಕೆಗೆ ಬಳಕೆಯಾಗುವ ದುಡ್ಡು ಯಾರಪ್ಪನದು?, ಅದು ನಮ್ಮ ದುಡ್ಡು, ಇಡೀ ದೇಶಕ್ಕೆ ಲಸಿಕೆ ನೀಡಲಿ, ಬಿಹಾರದವರು ಮಾತ್ರ ಮನುಷ್ಯರಾ? ಕರ್ನಾಟಕದವರು ಅಲ್ವಾ? ಎಂದು ಕೇಂದ್ರ ಸರ್ಕಾರದ ವಿರುದ್ದ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಆರ್.ಆರ್.ನಗರದಲ್ಲಿ ಡಿಕೆಶಿ ಗೂಂಡಾ ವರ್ತನೆ ತೋರುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಯಾರು ಗುಂಡಾಗಳಿಲ್ಲ, ಬಿಜೆಪಿಯಲ್ಲಿರುವರೆಲ್ಲರೂ ಗುಂಡಾಗಳೇ, ಡಿಕೆಶಿ ಎಲ್ಲಿ ಗುಂಡಾಗಿರಿ ಮಾಡಿದ್ದಾರೆ ತೋರಿಸಲಿ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದು, ಇವರು ಹಿಟ್ಲರ್ ಸಂಪುಟದಲ್ಲಿದ್ದ ಗೋಬಲ್ಸ್ ವಂಶಸ್ಥರು ಎಂದು ಲೇವಡಿ ಮಾಡಿದರು.