ಚಿತ್ರದುರ್ಗ: ದಿವಂಗತ ನಟ ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕೆ ಕೊಟೆನಾಡಿನ ಅಭಿಮಾನಿಯೊಬ್ಬರು ವಿಶೇಷ ಉಡುಗೊರೆ ನೀಡಿದ್ದಾರೆ. ಹೌದು, ವಿದ್ಯಾರ್ಥಿನಿ ಐಶ್ವರ್ಯಾ ಎಂಬುವವರು ಸ್ಟ್ರಿಂಗ್ ಆರ್ಟ್ / ಥ್ರೆಡ್ ಆರ್ಟ್ ಮೂಲಕ ವಿಷ್ಣುವರ್ಧನ್ ಕಲಾಕೃತಿ ರಚಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸ್ಟ್ರಿಂಗ್ ಆರ್ಟ್ ಮೂಲಕ ವಿಷ್ಣುವರ್ಧನ್ ಕಲಾಕೃತಿ ಇಂಜಿನಿಯರಿಂಗ್ ಪದವೀಧರೆ ಜಿ.ಜಿ. ಐಶ್ವರ್ಯಾ ಬರೋಬ್ಬರಿ 5 ಕಿ.ಮೀ. ನಷ್ಟು ಉದ್ದದ ದಾರ ಬಳಸಿಕೊಂಡು ಮರದ ಬೋರ್ಡ್‌ನಲ್ಲಿ ಮೊಳೆಗಳ ಸಹಾಯದಿಂದ ಸತತ 15 ತಾಸು ಸಮಯಾವಕಾಶದಲ್ಲಿ ವಿಷ್ಣುವರ್ಧನ್ ಅವರ ಸುಂದರ ಕಲಾಕೃತಿ ರಚಿಸಿದ್ದಾರೆ. ಎಷ್ಟೋ ಅಭಿಮಾನಿಗಳು ನೆಚ್ಚಿನ ನಟ, ನಟಿಯರಿಗಾಗಿ ಅಚ್ಚೆ ಹಾಕಿಸಿಕೊಳ್ಳುವುದು, ಅವರ ಫೋಟೋ ಮನೆಯಲ್ಲಿಟ್ಟು ಪೂಜೆ ಮಾಡುವುದು, ಫೋಟೋಗಳನ್ನು ಸಂಗ್ರಹಿಸುವುದು, ಅವರಿಗಾಗಿ ದೇವಾಲಯ ಕಟ್ಟುವುದನ್ನು ನೋಡಿದ್ದೇವೆ. ಆದರೆ, ದಾರದಲ್ಲಿ ಕಲಾಕೃತಿ ರಚಿಸಿರುವುದು ಅಪರೂಪವಾಗಿದೆ.
ವಿಷ್ಣುವರ್ಧನ್ ಅಭಿಮಾನಿ ಐಶ್ವರ್ಯಾ ಕೈಚಳಕ:
ಮೂಲತಃ ಚಿತ್ರದುರ್ಗದ ಜಯಲಕ್ಷ್ಮಿ ಬಡಾವಣೆಯ ಐಶ್ವರ್ಯಾ ಇಂಜಿನಿಯರಿಂಗ್ ಪದವಿ ಪಡೆದ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಟ ವಿಷ್ಣುವರ್ಧನ್ ಅವರ ಪಕ್ಕಾ ಅಭಿಮಾನಿಯಾಗಿದ್ದು, ಅವರಿಗೊಂದು ವಿಶಿಷ್ಟ ಉಡುಗೊರೆ ಸಿದ್ಧಪಡಿಸಬೇಕು ಎಂಬ ಬಹುದಿನಗಳ ಆಸೆ ಈ ಮೂಲಕ ನೆರವೇರಿದೆ.
ಒಂದು ಹಲಗೆಯ ಮೇಲೆ ವೃತ್ತಾಕಾರದಲ್ಲಿ ಸಣ್ಣ ಮೊಳೆಗಳನ್ನು ಹೊಡೆದು, ಅದರ ಮೂಲಕ ಒಂದು ಬದಿಯಿಂದ ಮತ್ತೊಂದು ಬದಿಗೆ ದಾರ ಎಳೆಯುವ ಮೂಲಕ ದಾರದಲ್ಲೇ ವಿಷ್ಣುವರ್ಧನ್ ಮುಖದ ಚಿತ್ರ ಮೂಡಿಸಲಾಗಿದೆ. ಓದಿದ್ದು ಇಂಜಿನಿಯರಿಂಗ್, ಆದರೂ ಕಲೆಗಳಲ್ಲಿ ಮೊದಲಿಂದಲೂ ಆಸಕ್ತಿ. ಏನೇ ಹೊಸತು ಕಂಡರೂ ಕಲಿಯುವ ಹವ್ಯಾಸ. ಯಾವುದೇ ಕಲೆಯನ್ನು ಮೊದಲು ರಚನೆ ಮಾಡುವುದು ನನ್ನ ಇಷ್ಟದ ಹೀರೋ ವಿಷ್ಣುವರ್ಧನ್ ಅವರ ಬಗ್ಗೆಯೇ. ಈ ವರ್ಷದ ದಾರದ ಆರ್ಟ್ ಕೂಡಾ ಅವರಿಗಾಗಿ ಎನ್ನುತ್ತಾರೆ ಐಶ್ವರ್ಯಾ.
ಇದನ್ನೂ ಓದಿ:ಮತ್ತೊಬ್ಬನ ಜೊತೆ ಸಂಬಂಧ: ಪ್ರಿಯಕರನ ಕೊಲೆಗೆ ಸುಪಾರಿ ಕೊಟ್ಟ ಪ್ರಿಯತಮೆ
ಐಶ್ವರ್ಯಾ ದಾರದ ಮೂಲಕ ವಿಷ್ಣುದಾದ ಭಾವಚಿತ್ರ ಮೂಡಿಸಿರುವ ಈ ವಿಶಿಷ್ಟ ಕಲೆಗೆ ಸ್ಟ್ರಿಂಗ್ ಆರ್ಟ್ ಎನ್ನುತ್ತಾರೆ. ಸೋಷಿಯಲ್ ಮೀಡಿಯಾ ನೋಡುತ್ತಿದ್ದಾಗ ಐಶ್ವರ್ಯಾ ಅವರಿಗೆ ಈ ಕಲೆ ಪರಿಚಯವಾಗಿದೆ. ನಾನು ಯಾಕೆ ಇದನ್ನು ಕಲಿಯಬಾರದು ಎಂದು ಯೂಟ್ಯೂಬ್ ಅಲ್ಲಿ, ಇಲ್ಲಿ ತಡಕಾಡಿದ್ದಾರೆ. ಅಲ್ಲಿಯೂ ಸರಿಯಾದ ಮಾಹಿತಿ ಸಿಗದಿದ್ದಾಗ ಪುಸ್ತಕಗಳ ಮೊರೆ ಹೋಗಿದ್ದಾರೆ. ಅಂತೂ ಇಂತೂ ಎಲ್ಲ ತಡಕಾಡಿ ಕಳೆದ ಒಂದು ವರ್ಷದಿಂದ ಅಭ್ಯಾಸ ಮಾಡಿ, ಮೊದಲನೇ ಕಲಾಕೃತಿಯಾಗಿ ವಿಷ್ಣುವರ್ಧನ್ ಅವರ ಭಾವಚಿತ್ರ ರಚಿಸಿದ್ದಾರೆ.
ಈಗ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಕಲಾಕೃತಿಯನ್ನು ನಟ ಹಾಗೂ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರಿಗೆ ತಲುಪಿಸಲು ಐಶ್ವರ್ಯಾ ಹಾಗೂ ಚಿತ್ರದುರ್ಗದ ವಿಷ್ಣು ಅಭಿಮಾನಿಗಳಾದ ಪುನೀತ್ ಮತ್ತಿತರರು ಪ್ರಯತ್ನಿಸುತ್ತಿದ್ದಾರೆ.