ಚಳ್ಳಕೆರೆ (ಚಿತ್ರದುರ್ಗ):ಸ್ಯಾಂಡಲ್ವುಡ್ನಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ನಟನೆಯ 125ನೇ ಚಿತ್ರ 'ವೇದ'. ಡಿಸೆಂಬರ್ 30ರಂದು ತೆರೆ ಕಂಡಿರುವ ಈ ವೇದ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ವರ್ಷದ ಕೊನೆಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಕೇವಲ ಮೂರು ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಮಟ್ಟದ ಕಲೆಕ್ಷನ್ ಮಾಡಿದೆ. ವೇದ ಭರ್ಜರಿ ಯಶಸ್ವಿಗೆ ಚಿತ್ರ ತಂಡ ಸಿನಿಮಾ ಪ್ರಚಾರ ಕಾರ್ಯ ಮುಂದುವರಿಸಿದ್ದು, ಇಂದು ಕೋಟೆನಾಡಿಗೆ ಕರುನಾಡ ಚಕ್ರವರ್ತಿ ಟೀಂ ಎಂಟ್ರಿ ಕೊಟ್ಟಿದೆ.
ಶಿವ ರಾಜ್ಕುಮಾರ್ ರೋಡ್ ಶೋ:ವೇದ ಸಿನಿಮಾ ಪ್ರಚಾರದ ಭಾಗವಾಗಿ ಇಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಕೆಇಬಿ ಮುಂಭಾಗ ನಟ ಶಿವ ರಾಜ್ಕುಮಾರ್ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ರೋಡ್ ಶೋ ನೆಡೆಸಿದರು. ಅಭಿಮಾನಿಗಳು ವೇದ ಸಿನಿಮಾ ಸಂಭ್ರಮಾಚರಣೆಯಲ್ಲಿ ಮಿಂದೆದ್ದರು. ಹ್ಯಾಟ್ರಿಕ್ ಹೀರೋ ತಮ್ಮ ತಂಡದೊಂದಿಗೆ ಇಂದು ನಗರಕ್ಕೆ ಅಗಮಸಿದ್ದು, ಅವರಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ಅಭಿಮಾನಿಗಳು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
'ಕನ್ನಡ ಚಿತ್ರರಂಗವನ್ನು ಪ್ರೋತ್ಸಾಹಿಸಿ': ನಟ ಶಿವ ರಾಜ್ಕುಮಾರ್ ಮಾತನಾಡಿ, ನನ್ನ 125ನೇ ಚಿತ್ರವನ್ನು ಡೈರೆಕ್ಟರ್ ಎ. ಹರ್ಷ ನಿರ್ದೇಶನ ಮಾಡಿದ್ದು, ಚಿತ್ರ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಕ್ಕೆ ಕರ್ನಾಟಕ ಅಲ್ಲದೇ ತಮಿಳುನಾಡು, ಮುಂಬೈನಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದು ನಮಗೆ ಬಹಳ ಖುಷಿ ತಂದು ಕೊಟ್ಟಿದೆ. ಎಲ್ಲರೂ ಸಿನಿಮಾವನ್ನು ಥಿಯೇಟರ್ ಹೋಗಿ ವೀಕ್ಷಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡಬೇಕು. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿ ದೇವರುಗಳು ಸೇರಿರುವುದು ನನಗೆ ಸಂತೋಷವಾಗಿದೆ. ಇದೇ ರೀತಿ ನಿಮ್ಮ ಪ್ರೋತ್ಸಾಹ ಮುಂದುವರಿಯಲಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.