ಚಿತ್ರದುರ್ಗ: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಹರೇಕಳ ಹಾಜಬ್ಬ ಅವರು ಅನಕ್ಷರಸ್ಥ. ಸಿಎಎ ಮತ್ತು ಎನ್ಆರ್ಸಿ ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ಶಾಲೆಗೆ ಹೋಗದ ಹಾಜಬ್ಬ ಅಂಥವರಿಂದ ಯಾವ ದಾಖಲೆಗಳನ್ನು ಪಡೆಯುತ್ತದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಪ್ರಶ್ನಿಸಿದ್ದಾರೆ.
ಪದ್ಮಶ್ರೀ ಹಾಜಬ್ಬ ಕೇಂದ್ರಕ್ಕೆ ಎನ್ಆರ್ಸಿ ಕುರಿತು ಯಾವ ದಾಖಲೆ ತೋರಿಸಬೇಕು: ಖಾದರ್ ಪ್ರಶ್ನೆ
ಹರೇಕಳ ಹಾಜಬ್ಬ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಕ್ಷರವನ್ನೇ ಕಲಿಯದ ಹಾಜಬ್ಬ ಅವರ ಬಳಿ ಎನ್ಆರ್ಸಿಗೆ ಸಂಬಂಧಿಸಿದಂತೆ ಯಾವ ದಾಖಲೆಗಳನ್ನು ಪಡೆಯುತ್ತೀರಿ ಎಂದು ಮಾಜಿ ಸಚಿವ ಯು ಟಿ ಖಾದರ್ ಅವರು ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪದ್ಮಶ್ರೀ ಪ್ರಶಸ್ತಿಗೂ, ಪೌರತ್ವಕ್ಕೂ ಸಂಬಂಧವಿದ್ದು, ಪದ್ಮಶ್ರೀ ಪ್ರಶಸ್ತಿ ಕೊಟ್ಟ ಅಕ್ಷರ ಸಂತ ಹಾಜಬ್ಬಗೆ ಹೇಗೆ ಪೌರತ್ವ ಕೊಡುತ್ತೀರಿ? ಹಾಜಬ್ಬ, ತುಳಸಿ ಗೌಡರಿಗೆ ಪದ್ಮಶ್ರೀ ಕೊಟ್ಟಿರೋದಕ್ಕೆ ಕೇಂದ್ರ ಸರ್ಕಾರವನ್ನ ಅಭಿನಂದಿಸುತ್ತೇನೆ, ನಾಳೆ ಪೌರತ್ವ ಸಾಬೀತುಪಡಿಸಲು ಹಾಜಬ್ಬರನ್ನೂ ಸರತಿ ಸಾಲಲ್ಲಿ ನಿಲ್ಲಿಸುತ್ತೀರಾ? ಹಾಜಬ್ಬ ಶಾಲೆಗೆ ಹೋಗಲು ಆಗಿರಲಿಲ್ಲ, ಬಡತನ ಇತ್ತು. ಓದು, ಬರಹ ಇಲ್ಲ, ನೀವು ದಾಖಲೆ ಕೇಳಿದ್ರೆ ಅವರು ಹೇಗೆ ದಾಖಲಾತಿ ಕೊಡ್ತಾರೆ ಎಂದು ಎನ್ಆರ್ಸಿ, ಸಿಎಎ ವಿರುದ್ಧ ಆಕ್ರೋಶ ಹೊರಹಾಕಿದರು.
ಎನ್ಆರ್ಸಿ ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ದೇಶದಲ್ಲಿ ಎನ್ಆರ್ಸಿ ಜಾರಿ ಆಗುತ್ತೋ ಇಲ್ಲವೋ ಎಂಬುದನ್ನು ಮೊದಲು ದೇಶದ ಜನರಿಗೆ ಹೇಳಿ. ಇಂದು ಮಂಗಳೂರಲ್ಲಿ ಎನ್ಆರ್ಸಿ ಮತ್ತು ಸಿಎಎ ಪರ ಜಾಗೃತಿ ಜಾಥಾ ನಡೆಯುತ್ತಿದ್ದು, ಅದರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಲ್ಗೊಳ್ಳುತ್ತಿದ್ದಾರೆ. ಅವರು ಮೊದಲು ಎನ್ಆರ್ಸಿ ಮತ್ತು ಸಿಎಎ ಕುರಿತು ಜನರಿಗೆ ನಿಜವಾದ ಅಂಶಗಳನ್ನು ವಿವರಿಸಲಿ ಎಂದು ಖಾದರ್ ಒತ್ತಾಯಿಸಿದರು.