ಚಿತ್ರದುರ್ಗ : ಕೇಂದ್ರ ಲೋಕಸೇವಾ ಆಯೋಗದ (UPSC) ಪರೀಕ್ಷೆಯಲ್ಲಿ 707ನೇ ರ್ಯಾಂಕ್ ಪಡೆಯುವ ಮೂಲಕ ಕೋಟೆನಾಡಿನ ಯುವತಿಯೊಬ್ಬಳು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಹೊಸದುರ್ಗ ತಾಲೂಕಿನ ದೇವಪುರ ಬೋವಿ ಹಟ್ಟಿ ಗ್ರಾಮದ ಯುವತಿ ಜಿ. ಮಮತಾ ಈ ಸಾಧನೆ ಮಾಡಿದ ಯುವತಿ. ಭೋವಿ ಹಟ್ಟಿ ಗ್ರಾಮದ ಗೋವಿಂದಪ್ಪ ಹಾಗೂ ಚಂದ್ರಮ್ಮ ದಂಪತಿಯ ಪುತ್ರಿ ಜಿ. ಮಮತಾ ಪ್ರಾಥಮಿಕ ಶಿಕ್ಷಣವನ್ನು ದೇವಪುರ ಗ್ರಾಮದಲ್ಲಿ ಪೂರೈಸಿ, ಶಿವಮೊಗ್ಗದಲ್ಲಿ ಪಿಯುಸಿ ಓದಿ ಬಳಿಕ ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿದ್ದಾರೆ. ಬಳಿಕ ಬೆಂಗಳೂರಿನಲ್ಲೇ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿ ತೇರ್ಗಡೆಯಾಗಿದ್ದಾರೆ.
ಪೋಷಕರ ಮಾರ್ಗದರ್ಶನವೇ ಈ ನನ್ನ ಯಶಸ್ಸಿಗೆ ಕಾರಣ...
ಈ ಕುರಿತು ಮಾತನಾಡಿರುವ ಮಮತಾ, ನನ್ನ ಸಾಧನೆಗೆ ಪೋಷಕರು ಹಾಗೂ ಮಾರ್ಗದರ್ಶಕರ ಬೆಂಬಲ ಕಾರಣ. ಚಿಕ್ಕಂದಿನಿಂದಲೂ ಓದಿನಲ್ಲಿ ಆಸಕ್ತಿಯನ್ನ ನಮ್ಮ ತಂದೆ ತಾಯಿ ಬೆಳೆಸಿದರು. ಪರಿಣಾಮ ಇಂಥದೊಂದು ಸಾಧನೆಗೆ ಮುನ್ನುಡಿ ಆಯಿತು ಎಂದರು.
ಯಾರೇ ಯುಪಿಎಸ್ಸಿ ಪರೀಕ್ಷೆ ತೇರ್ಗಡೆ ಆಗಬೇಕೆಂದರೆ ಮೊದಲು ಸಿದ್ಧತೆ, ಪರಿಶ್ರಮದ ಜೊತೆಗೆ ಯುಪಿಎಸ್ಸಿ ಡಿಮ್ಯಾಂಡ್ ಅನ್ನು ಅರ್ಥ ಮಾಡಿಕೊಳ್ಳಬೇಕು. ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂಬ ಹಂಬಲ ಇದೆ ಎಂದರು. ಇನ್ನು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಮಮತಾ ಅವರನ್ನು ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಅಭಿನಂದಿಸಿದ್ದಾರೆ.