ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಪ್ರತಿಕ್ರಿಯೆ ಚಿತ್ರದುರ್ಗ: ಜಿಲ್ಲೆಯ ಕಾವಾಡಿಗರಹಟ್ಟಿಯಲ್ಲಿ ಕಲುಷಿತ ನೀರಿನಿಂದ ಜೀವಹಾನಿಯಾದ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇನೆ. ಜಿಲ್ಲಾಧಿಕಾರಿ ಸೇರಿದಂತೆ ಹಲವರು ಕಾವಾಡಿಗರಹಟ್ಟಿ ಬಡಾವಣೆಯಲ್ಲಿ ಸಂಭವಿಸಿದ ಘಟನೆ ಬಗ್ಗೆ ಸಂಪೂರ್ಣ ವಿವರಣೆ ನೀಡಿರುವುದಾಗಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು. ಘಟನಾ ಸ್ಥಳ ಕಾವಾಡಿಗರಹಟ್ಟಿ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಇಂದು (ಶುಕ್ರವಾರ) ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲಾಡಳಿತಕ್ಕೆ ತಿಳಿಯದೇ ಬೆಂಗಳೂರಲ್ಲಿ ಓರ್ವ ಮೃತಪಟ್ಟಿದ್ದಾರೆ. ಕಲುಷಿತ ನೀರು ಸೇವಿಸಿ ಒಟ್ಟು ಐದು ಜನ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ವೈದ್ಯಾಧಿಕಾರಿಗಳು ಸೇರಿದಂತೆ ಜಿಲ್ಲಾ ಅಧಿಕಾರಿಗಳೆಲ್ಲ ದಿನದ 24 ಗಂಟೆಗಳ ಕಾಲ ಸೇವೆಯಲ್ಲಿ ತೊಡಗಿದ್ದಾರೆ. ಹಾಗಾಗಿ ಜನರು ಭಯಭೀತರಾಗದಂತೆ ಕೇಂದ್ರ ಸಚಿವರು ಸ್ಥಳೀಯರಲ್ಲಿ ಮನವಿ ಮಾಡಿಕೊಂಡರು.
ವ್ಯಕ್ತಿಯೊಬ್ಬರು ಕುಡಿಯುವ ನೀರಿನಲ್ಲಿ ವಿಷ ಬೆರೆಸಿದ್ದಾನೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಈ ಬಗ್ಗೆ ಮಾಹಿತಿ ಇಲ್ಲದೇ ನಾನು ಮಾತನಾಡಲ್ಲ. ವಿಷ ಬೆರೆಸಿದರೆ ಹೆಚ್ಚಾಗಿ ವಾಂತಿ ಮಾತ್ರ ಆಗುತ್ತದೆ. ಆದರೆ, ಇಲ್ಲಿ ಹಲವರಲ್ಲಿ ಬೇಧಿ ಕೂಡ ಕಂಡು ಬಂದಿದೆ. ಅಲ್ಲದೇ ಗ್ರಾಮಸ್ಥರು ಈ ಬಗ್ಗೆ ಯಾವುದೇ ವ್ಯಕ್ತಿಯ ಮೇಲೆ ದೂರು ಕೂಡ ನೀಡಿಲ್ಲ. ನೀರಿಗೆ ವಿಷ ಬೆರೆಸಿದ ಕುರಿತು ಚರ್ಚೆ ಇದೆಯೇ ಹೊರತು ದೂರು ಕೊಟ್ಟಿಲ್ಲ. ನೀರಿನಲ್ಲಿ ಯಾವುದೇ ವಿಷ ಇಲ್ಲ ಎಂದು ಎಫ್ಎಸ್ಎಲ್ ವರದಿ ಕೂಡ ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರು, ಪರಿಣತರ ತಂಡವನ್ನು ಬಡಾವಣೆಗೆ ಕಳಿಸಿಕೊಡುವಂತೆ ಪತ್ರ ಬರೆದಿದ್ದರು. ಅದರಂತೆ ಪರಿಣತರ ತಂಡವನ್ನು ಇಲ್ಲಿಗೆ ಕಳಿಸಿಕೊಡಲಾಗಿದೆ ಎಂದರು.
ಘಟನೆ ಸಂಬಂಧ ಈಗಾಗಲೇ ರೋಗಿಗಳಿಗೆ ಚಿಕಿತ್ಸೆ ನೀಡಲು ತಿಳಿಸಿದೆ. ಸ್ಥಳಕ್ಕೆ ಜಿಲ್ಲಾ ಮಂತ್ರಿಗಳು ಹಾಗೂ ಶಾಸಕರು ಭೇಟಿ ನೀಡಿದ್ದಾರೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಇನ್ನು ಮುಂದೆ ನೀರಿನ ಪರೀಕ್ಷೆ ಮಾಡಲಾಗುತ್ತದೆ. ಸರ್ಕಾರ ನೀರು ಪರೀಕ್ಷೆ ಮಾಡುವ ಕಿಟ್ ಸಹ ನೀಡಿದೆ. ಜಿಲ್ಲಾ ಪಂಚಾಯತದಿಂದ ಟೀಂ ಮಾಡಲಾಗಿದೆ. ಶಾಂತಿ ಸಾಗರದಿಂದ ಬರುವ ನೀರಿನ ಪರೀಕ್ಷೆಗೆ ಸೂಚನೆ ನೀಡಿದ್ದೇವೆ. ಜನತೆ ಭಯಗೊಳ್ಳುವ ಆಗುವ ಅವಶ್ಯಕತೆ ಇಲ್ಲ. ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾಡಳಿತ 24 ಗಂಟೆ ಸೇವೆಗೆ ಸಿದ್ಧವಿದೆ. ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಫೈಲ್ ಮೂವ್ ಆಗಿದೆ. ಈ ಕುರಿತು ಈಗಲೇ ನಾನು ಮಾತನಾಡಲ್ಲ. ಜನತೆ ಯಾವುದೇ ಕಾರಣಕ್ಕೂ ಹೆದರದೇ ಧೈರ್ಯವಾಗಿರಬೇಕು ಎಂದು ಕೇಂದ್ರ ಸಚಿವರು ಹೇಳಿದರು.
ಇದಕ್ಕೂ ಮುನ್ನ ಕೇಂದ್ರ ಸಚಿವರು ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್, ಪುರುಷರು ಹಾಗೂ ಸ್ತ್ರೀಯರ ವಾರ್ಡಿಗೆ ಭೇಟಿ ಅಸ್ವಸ್ಥರ ಆರೋಗ್ಯ ಸ್ಥಿತಿ ವಿಚಾರಿಸಿದರು. ಸಂಸದರಿಗೆ ಮಾದಾರ ಚೆನ್ನಯ್ಯ ಸ್ವಾಮಿಜಿ, ಜಿಲ್ಲಾಧಿಕಾರಿ ದಿವ್ಯಾಪ್ರಭು, ಎಸ್ಪಿ ಕೆ. ಪರಶುರಾಮ್, ಡಿಹೆಚ್ಓ ರಂಗನಾಥ್ ಸೇರಿ ಅನೇಕರು ಸಾಥ್ ನೀಡಿದರು.
ಕಣ್ಬಿಡುವ ಮುನ್ನವೇ..: ಉಷಾ ಎಂಬ ಗರ್ಭಿಣಿಯ ಹೊಟ್ಟೆಯಲ್ಲಿ ನವಜಾತ ಶಿಶುವೊಂದು ಮೃತಪಟ್ಟ ಘಟನೆ ಕೂಡ ಇಂದು ನಡೆದಿದೆ. ವಾಂತಿ, ಬೇಧಿಯಿಂದ ಅವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿದಾಗ ಗರ್ಭದೊಳಿಗಿನ ಶಿಶುವಿನ ಹಾರ್ಟ್ ಬಿಟ್ ಸ್ಥಬ್ದಗೊಂಡಿತ್ತು. ಕೂಡಲೇ ವೈದ್ಯರು ಸಿಜರಿನ್ ಮಾಡುವ ಮೂಲಕ ಶಿಶುವನ್ನು ಹೊರತೆಗೆದರೂ ಪ್ರಯೋಜನವಾಗಲಿಲ್ಲ.
ಇದನ್ನೂ ಓದಿ:ಕವಾಡಿಗರಹಟ್ಟಿ ಕಲುಷಿತ ನೀರು ಸೇವನೆ ಪ್ರಕರಣ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ, ಗುತ್ತಿಗೆ ನೌಕರ ಸೇರಿ ಐವರ ಅಮಾನತು