ಚಿತ್ರದುರ್ಗ:ಸೂರ್ಯ-ಚಂದ್ರರಿರುವ ತನಕ ಟಿಪ್ಪು ಜಯಂತಿ ಆಚರಣೆ ಮಾಡ್ತೇವೆ ಎಂದು ಕರ್ನಾಟಕ ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಅಲಿ ಸವಾಲ್ ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರಂತಹ ನೂರು ಕೋಟಿ ನಾಯಕರು ಬಂದರೂ ಟಿಪ್ಪು ಜಯಂತಿ ನಿಲ್ಲಿಸಲ್ಲ. ಈ ಬಾರಿಯೂ ಚಿತ್ರದುರ್ಗದಲ್ಲಿ ಆಚರಿಸುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದು ಟಿಪ್ಪು ಜಯಂತಿ ಹಾಗೂ ಪಠ್ಯಕ್ರಮ ರದ್ದು ಮಾಡಲು ಮುಂದಾಗಿರುವುದು ಖಂಡನೀಯ ಎಂದು ಕಿಡಿಕಾರಿದರು.
ಕರ್ನಾಟಕ ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಅಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ಟಿಪ್ಪುವನ್ನು ವಿಧಾನಸಭೆಯಲ್ಲಿ ಹೊಗಳಿದ್ದಾರೆ. ಅಬ್ದುಲ್ ಕಲಾಂ ಅವರು ನಾಸಾಗೆ ತೆರಳಿದ್ದಾಗ ಅಲ್ಲಿದ್ದ ಟಿಪ್ಪು ಚಿತ್ರ ಕಂಡು ಕೊಂಡಾಡಿದ್ದರು. ಆದರೆ, ಯಡಿಯೂರಪ್ಪ ಅವರ ನಡೆ ಖಂಡನೀಯ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಗಾರರಲ್ಲ ಬದಲಾಗಿ ಬ್ರಿಟಿಷರ ಗುಲಾಮರು ಎಂದು ಆರೋಪಿಸಿದರು.
ಯಡಿಯೂರಪ್ಪ ಒಬ್ಬ ಭ್ರಷ್ಟ ರಾಜಕಾರಣಿ. ಅವರಿಗೆ ಟಿಪ್ಪು ಇತಿಹಾಸ ಗೊತ್ತಿಲ್ಲ. ಬದಲಾಗಿ ಟಿಪ್ಪು ,ರಾಮ ಮಂದಿರ, ಪುಲ್ವಾಮಾ ದಾಳಿ, ಹಿಂದೂ-ಮುಸ್ಲಿಂ, ಪಾಕಿಸ್ತಾನ ಎಂಬ ಅಜೆಂಡಾದೊಂದಿಗೆ ಚುನಾವಣೆ ಎದುರಿಸುವುದು ಮಾತ್ರ ಗೊತ್ತು. ಲೂಟಿ ಮಾಡಲು ಅಧಿಕಾರಕ್ಕೆ ಬರುವ ಮೂಲಕ ಧರ್ಮಗಳ ನಡುವೆ ಜಗಳ ಹಚ್ಚುವುದೇ ಬಿಜೆಪಿಯವರ ಅಜೆಂಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಟಿಪ್ಪು ಜಯಂತಿ ಮಾಡಬಾರದು ಎಂದು ಹೇಳಿಕೆ ನೀಡಿರುವುದು ಬೇಸರ ತರಿಸಿದೆ. ಮೊದಲು ಜಯಂತಿ ಮಾಡಬೇಕು ಎಂದ ವ್ಯಕ್ತಿ ಈಗ ಬೇಡ ಎನ್ನುತ್ತಿದ್ದಾರೆ ಎಂದರು.