ಚಿತ್ರದುರ್ಗ/ರಾಯಚೂರು/ವಿಜಯಪುರ:ರಾಜ್ಯದ ವಿವಿಧೆಡೆ ನಡೆದಮೂರು ಪ್ರತ್ಯೇಕ ಘಟನೆಗಳಲ್ಲಿ ವಿದ್ಯಾರ್ಥಿ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾನೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿ ಬಸ್ನಿಂದ ಕೆಳಗೆ ಬಿದ್ದು, ಯುವಕ ಮೃತಪಟ್ಟರೆ, ರಾಯಚೂರಿನಲ್ಲಿ ಬಸ್ ಡಿಕ್ಕಿಯಾಗಿ ವಿದ್ಯಾರ್ಥಿ ಅಸುನೀಗಿದ್ದಾನೆ. ಇನ್ನೊಂದೆಡೆ, ವಿಜಯಪುರದಲ್ಲಿ ಈಜಾಡಲು ಹೋಗಿ ಯುವಕ ನೀರುಪಾಲಾದ ಘಟನೆ ನಡೆದಿದೆ.
ಬಸ್ ಬಾಗಿಲಲ್ಲಿ ಕಾದಿತ್ತು ಸಾವು: ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದಾಗಿ ಬಸ್ಸಿನ ಮುಂಬಾಗಿಲಿನಲ್ಲಿ ನಿಂತಿದ್ದ ಯುವಕ ಆಯತಪ್ಪಿ ಕೆಳಗೆ ಬಿದ್ದಿದ್ದು, ಆತನ ಮೇಲೆ ಬಸ್ ಹರಿದಿದೆ. ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ಹೊತ್ತಿಗೆ ಚಳ್ಳಕೆರೆ ಟೌನ್ ಕಡೆಯಿಂದ ರೆಡ್ಡಿಹಳ್ಳಿ ಕಡೆಗೆ ಬಸ್ ಬರುತ್ತಿತ್ತು. ಈ ಬಸ್ಸಿನ ಮುಂಬಾಗಿಲಿನಲ್ಲಿ ನಿಂತಿದ್ದ ಚೇತನ್ ಎಂಬ ಯುವಕ ಸಮತೋಲನ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಸ್ ಚಕ್ರ ಆತನ ಸೊಂಟ ಮತ್ತು ಕಾಲಿನ ಮೇಲೆ ಹರಿದಿದೆ. ತಕ್ಷಣ ಚೇತನ್ ಅವರನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸ್ಥಳಕ್ಕೆ ಚಳ್ಳಕೆರೆ ಪಿಎಸ್ಐ ಡಿ.ತಿಮ್ಮಣ್ಣ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕೆಲಸಕ್ಕಿದ್ದ ಜ್ಯುವೆಲ್ಲರಿಯಿಂದ ₹58 ಲಕ್ಷ ಮೌಲ್ಯದ ಆಭರಣ ಕದ್ದ ಯುವತಿ ಸೆರೆ: ಸಿಸಿಟಿವಿ ದೃಶ್ಯ