ಕರ್ನಾಟಕ

karnataka

5 ಗ್ಯಾರಂಟಿ ಸೇರಿ ಯಾವುದೇ ಅಭಿವೃದ್ಧಿ ಕಾಮಗಾರಿಗೆ ಹಣದ ಕೊರತೆ ಇಲ್ಲ: ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Oct 6, 2023, 5:38 PM IST

Updated : Oct 6, 2023, 8:27 PM IST

ಐದು ಗ್ಯಾರಂಟಿ ಯೋಜನೆಗಳು ಸೇರಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

There is no shortage of funds for any development works: CM Siddaramaiah
There is no shortage of funds for any development works: CM Siddaramaiah

ಸಿಎಂ ಸಿದ್ದರಾಮಯ್ಯ ಹೇಳಿಕೆ

ಚಿತ್ರದುರ್ಗ:"ರಾಜ್ಯ ಕಾಂಗ್ರೆಸ್​ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ಸೇರಿದಂತೆ ಯಾವುದೇ ನಿಯಮಿತ ಅಭಿವೃದ್ಧಿ ಕಾಮಗಾರಿ ಹಾಗೂ ಕಾರ್ಯಕ್ರಮಕ್ಕೆ ಹಣದ ಕೊರತೆ ಇಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿಗಳಿಗಾಗಿ ರಾಜ್ಯದ ಅಭಿವೃದ್ಧಿಗಳು ಕುಂಠಿತಗೊಂಡಿವೆ ಅನ್ನೋದು ಸುಳ್ಳು. ಬಿಜೆಪಿ ನಾಯಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದ್ದೇ ಅವರು.​ ನಾವು ಈ ಹಿಂದೆ ಆಡಳಿತ ನಡೆಸಿದ್ದೆವು. ಯಾವತ್ತೂ ಇಷ್ಟು ಪ್ರಮಾಣದ ಸಾಲ ಮಾಡಿರಲಿಲ್ಲ. ಹಾಗಾಗಿ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಅವರಿಗಿಲ್ಲ" ಎಂದು ಕಿಡಿ ಕಾರಿದರು.

10 ಸದಸ್ಯರನ್ನು ಒಳಗೊಂಡ ಕೇಂದ್ರ ಬರ ಅಧ್ಯಯನ ತಂಡ ಕರ್ನಾಟಕಕ್ಕೆ ಆಗಮಿಸಿದೆ. ಅವರೊಂದಿಗಿನ ಚರ್ಚೆಯ ಕುರಿತು ಕೇಳಿದಾಗ, "ತಂಡದ ಸದಸ್ಯರು ನಿನ್ನೆ ತಮ್ಮನ್ನು ಭೇಟಿ ಮಾಡಿದ್ದರು. ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ಹಸಿರು ಬರ ಎದುರಾಗಿದೆ. ಹಸಿರು ಕಾಣುತ್ತದೆ. ಆದರೆ, ಬೆಳೆ ವಿಫಲವಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ 236 ತಾಲೂಕು ಪೈಕಿ 195 ತಾಲೂಕು ಬರಪೀಡಿತ ಎಂಬುದಾಗಿ ಘೋಷಣೆ ಮಾಡಲಾಗಿದೆ. ಸುಮಾರು 30 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬೆಳೆ ಹಾನಿ ಆಗಿದೆ. 42 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದೆ. ಶೇ 52ರಷ್ಟು ಬರದಿಂದ ಬೆಳೆ ಹಾನಿ ಸಂಭವಿಸಿದೆ. ಕೆಲವು ಜಲಾಶಯಗಳನ್ನು ಹೊರತುಪಡಿಸಿದರೆ ಈ ಬಾರಿ ನಮ್ಮ ಭಾಗಶಃ ಜಲಾಶಯಗಳಲ್ಲಿ ನೀರಿನ ಕೊರತೆ ಇದೆ. 4,860 ಕೋಟಿ ರೂ. ಬೆಳೆ ಪರಿಹಾರ ಕೇಳಿದ್ದೇವೆ. ಹಾಗಾಗಿ ಕೇಂದ್ರ ಅಧ್ಯಯನ ತಂಡದಿಂದ ವಸ್ತುಸ್ಥಿತಿ ಅಧ್ಯಯನಕ್ಕೆ ಸೂಚನೆ ನೀಡಲಾಗಿದೆ" ಎಂದರು.

"ಭದ್ರಾ ಮೇಲ್ದಂಡೆ ಯೋಜನೆ ವಿಳಂಬಕ್ಕೆ ಪ್ರತಿಕ್ರಿಯಿಸಿ, "ಕೇಂದ್ರ ಸರ್ಕಾರ ಹಾಗೂ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 5,300 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ, ಈವರೆಗೂ ಕೇಂದ್ರದಿಂದ ಒಂದೇ ಒಂದು ರೂಪಾಯಿ ಕೂಡ ಬಂದಿಲ್ಲ. ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಈ ಬಗ್ಗೆ ಕೇಂದ್ರಕ್ಕೆ ಪತ್ರ ಕೂಡ ಬರೆದಿದ್ದೇನೆ. ನಮ್ಮ ಸಚಿವರು ಸಂಬಂಧಪಟ್ಟವರನ್ನು ಭೇಟಿ ಮಾಡಿದ್ದಾರೆ. ನಾನು ಕೂಡ ಭೇಟಿ ಮಾಡಿದ್ದೇನೆ. ಆದರೆ, 6 ತಿಂಗಳಾದರೂ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ" ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

"ನಮ್ಮ ಸರ್ಕಾರ ನೀರಾವರಿಗೆ ಒತ್ತು ನೀಡಲಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಸರ್ಕಾರದಿಂದ ವಿಶೇಷವಾದ ಪ್ರಾಧಾನ್ಯತೆ ನೀಡಲಾಗುವುದು. ಈ ವರ್ಷದ ಬಜೆಟ್‌ನಲ್ಲಿ ಹಣ ಮೀಸಲಿಡುವುದಾಗಿ ಮತ್ತು ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಹಣ ಮೀಸಲಿಡುತ್ತೇವೆ" ಸಿಎಂ ಇದೇ ವೇಳೆ ತಿಳಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿ, "ಇದು ಅಪವಿತ್ರ ಮೈತ್ರಿ. ಜೆಡಿಎಸ್ ಪಕ್ಷದ ಉಳಿವಿಗಾಗಿ ಸಿದ್ಧಾಂತವನ್ನು ಗಾಳಿಗೆ ತೂರಿದೆ. ಜನತಾದಳ ಸೆಕ್ಯುಲರ್ ಅಂತ ಹೆಸರಿಟ್ಟುಕೊಂಡು ಇದೀಗ ಕೋಮುವಾದಿ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ" ಎಂದು ಎರಡೂ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. "ಮದ್ಯದಂಗಡಿ ತೆರಯುವ ಬಗ್ಗೆ ಸಚಿವರು ಚಿಂತನೆ ನಡೆಸಿದ್ದರು. ಆದರೆ, ನಮ್ಮ ಸರ್ಕಾರ ಮದ್ಯದ ಅಂಗಡಿ ತೆಗೆಯಲ್ಲ" ಎಂದು ಹೇಳಿದರು.

ಕವಾಡಿಗರಹಟ್ಟಿಗೆ ಭೇಟಿ ನೀಡಿದ ಸಿಎಂ, "ಚಿತ್ರದುರ್ಗದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ಮಳೆ ಇಲ್ಲ. ಮಲೆನಾಡಲ್ಲೂ ಮಳೆ ಇಲ್ಲ. ಕಬಿನಿಗೆ ಕೇರಳದಿಂದ ನೀರು ಬರ್ತಿತ್ತು. ಕೇರಳ, ಮಹಾರಾಷ್ಟದಲ್ಲೂ ಮಳೆ ಇಲ್ಲ. ಹಾಗಾಗಿ ಅಲ್ಲಿಯೂ ನೀರಿನ ಕೊರತೆ ಉಂಟಾಗಿದೆ. ಪರಿಣಾಮ ಜನರು ಗುಳೆ ಹೋಗಬಹುದು. ಎಚ್ಚರ ವಹಿಸಬೇಕು. ಜಾನುವಾರುಗಳಿಗೆ ನೀರು, ಮೇವು ಒದಗಿಸಬೇಕು. ಕುಡಿಯುವ ನೀರು, ಕೃಷಿಗೆ ಸಮಸ್ಯೆ ಆಗದಂತೆ ಸರ್ಕಾರ ಕಾಳಜಿ ವಹಿಸಲಿದೆ" ಎಂದರು.

ಇದನ್ನೂ ಓದಿ:ಒಂದೆಡೆ ಮೈತ್ರಿಗೆ ವಿರೋಧ, ಮತ್ತೊಂದೆಡೆ ಪಕ್ಷದ ಪುನಶ್ಚೇತನಕ್ಕೆ ಜೆಡಿಎಸ್ ಸಿದ್ಧತೆ

Last Updated : Oct 6, 2023, 8:27 PM IST

ABOUT THE AUTHOR

...view details