ಚಿತ್ರದುರ್ಗ:ಕಡಿಮೆ ದರದಲ್ಲಿ ಬಡಜನರಿಗೆ ವಾಸಿಸಲು ಮನೆಗಳು ಸಿಗುವಂತಾಗಬೇಕು ಎಂದು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ವರ್ಷವೂ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಈ ಬಡಾವಣೆಯಲ್ಲಿ ನಿರ್ಮಾಣವಾದ ವಸತಿಗೃಹಗಳು ದಿಕ್ಕು ದೆಸೆ ಇಲ್ಲದಂತಾಗಿ, ಸರ್ಕಾರದ ಯೋಜನೆ ಹಳ್ಳ ಹಿಡಿದಂತಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಚಿತ್ರದುರ್ಗದ ಮದಕರಿಪುರದಲ್ಲಿ ಜನರಿಗೆ ಕಡಿಮೆ ಹಣದಲ್ಲಿ ಮನೆಗಳನ್ನು ನೀಡಲು ಕಳೆದ ಹತ್ತು ವರ್ಷಗಳ ಹಿಂದೆ ಈ ಬಡಾವಣೆಯಲ್ಲಿ ಕರ್ನಾಟಕ ಗೃಹ ಮಂಡಳಿ ಇಲಾಖೆ 30 ಮನೆಗಳನ್ನು ನಿರ್ಮಿಸಿದೆ. ಯೋಜನೆಯ ಮನೆಗಳು ಫಲಾನುಭವಿಗಳಿಗೆ ಹಂಚಿಕೆಯಾಗದೆ ಸರ್ಕಾರದ ಯೋಜನೆ ಹಳ್ಳ ಹಿಡಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಧಿಕಾರಿಗಳು ಬಡ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡದೆ ನಿರ್ಲಕ್ಷ್ಯ ತೋರಿದ ಪರಿಣಾಮ, ಈ ನಿಲಯಗಳು ಪಾಳು ಬಿದ್ದಿವೆ. ಅಧಿಕಾರಿಗಳ ನಿರ್ಲಕ್ಷದಿಂದ ಗೃಹ ಮಂಡಳಿಯ ಮನೆಗಳು ಹಾಳಾಗಿವೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.