ಚಿತ್ರದುರ್ಗ:ಸಾಮಾನ್ಯವಾಗಿ ಆಷಾಢ ಮಾಸ ಬಂತೆಂದರೆ ಸಾಕು ಮಲೆನಾಡು, ಕರಾವಳಿ ಭಾಗದಲ್ಲಿ ಗಾಳಿಪಟ ಹಬ್ಬವನ್ನೂ ಆಯೋಜನೆ ಮಾಡಲಾಗುತ್ತದೆ. ಆದರೆ, ಇದೀಗ ಗಾಳಿಪಟ ಹಬ್ಬವನ್ನು ಬಯಲುಸೀಮೆಯ ಚಿತ್ರದುರ್ಗಕ್ಕೂ ಕಾಲಿಟ್ಟಿದ್ದು, ಸಾಕಷ್ಟು ಚಿಣ್ಣರು ಭಾಗಿಯಾಗಿ ತಮ್ಮ ನೆಚ್ಚಿನ ಬಣ್ಣ ಬಣ್ಣದ ಗಾಳಿಪಟಗಳನ್ನು ಗಾಳಿಯಲ್ಲಿ ಹಾರಿ ಬಿಡುವ ಮೂಲಕ ಹರ್ಷವ್ಯಕ್ತಪಡಿಸಿದರು.
ಇವು ಬಾಲ ಇದ್ರೂನೂ ಕೋತಿಯಲ್ಲ.. - undefined
ಕೋಟೆನಾಡಿನಲ್ಲಿ ಇಂದು ಜ್ಞಾನ ಭಾರತಿ ಶಾಲೆ ವತಿಯಿಂದ ಮಕ್ಕಳಿಗಾಗಿ ಗಾಳಿಪಟ್ಟ ಹಬ್ಬವನ್ನು ಆಯೋಜನೆ ಮಾಡಲಾಗಿದ್ದು, ಶಾಲೆಯ ಶಿಕ್ಷಕರು, ಪೋಷಕರು ಮಕ್ಕಳೊಡನೆ ಸೇರಿ ಹಬ್ಬದ ಸಂತೋಷವನ್ನು ಸವಿದರು.

ಬರದ ನಾಡು ಚಿತ್ರದುರ್ಗದಲ್ಲಿ ಗಾಳಿಪಟ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ನಗರದ ಜ್ಣಾನ ಭಾರತಿ ಶಾಲೆ ವತಿಯಿಂದ ಮಕ್ಕಳಿಗಾಗಿ ಐತಿಹಾಸಿಕ ಚಂದ್ರವಳ್ಳಿಯ ಮೈದಾನದಲ್ಲಿ ಆಯೋಜಿಸಲಾಗಿದ್ದ ಈ ಗಾಳಿಪಟ ಹಬ್ಬದಲ್ಲಿ, ಪೋಷಕರು ತರಹೇವಾರಿ ಪತಂಗಗಳನ್ನು ಆಕಾಶದೆತ್ತರಕ್ಕೆ ಹಾರಿಬಿಟ್ಟು ಮಕ್ಕಳೊಂದಿಗೆ ಸಂತೋಷವನ್ನು ಹಂಚಿಕೊಂಡರು. ಶಾಲೆಯ ಸಿಬ್ಬಂದಿ ಹಾಗೂ ಶಿಕ್ಷಕರು ತಮಗಿಷ್ಟ ಬಂದ ಗಾಳಿಪಟ ಹಾರಿಬಿಟ್ಟು ಮಕ್ಕಳೊಂದಿಗೆ ಖುಷಿ ಹಂಚಿಕೊಂಡರು. 1973 ರಲ್ಲಿ ಆರಂಭವಾದ ಈ ಜ್ಞಾನ ಭಾರತಿ ಶಾಲೆ ಸತತವಾಗಿ ಈ ಗಾಳಿಪಟ ಹಬ್ಬ ಆಚರಣೆ ಮಾಡುತ್ತಾ ಬರ್ತಿದೆ. ಇವತ್ತಿನದು 46 ನೇ ಗಾಳಿಪಟ ಹಬ್ಬ. ಇದೇ ಶಾಲೆಯ ವಿದ್ಯಾರ್ಥಿಗಳು ಗಿನ್ನಿಸ್ ರೆಕಾರ್ಡ್ ಮಾಡಬೇಕೆಂಬ ಹಂಬಲದಿಂದ 2012ರಲ್ಲಿ ಗುಜಾರಾತ್ ರಾಜ್ಯಕ್ಕೆ ಭೇಟಿ ನೀಡಿದ್ದರು.
ಗಿನ್ನಿಸ್ ರೆಕಾರ್ಡ್ ಸೇರಲು ಈ ಶಾಲೆ ವಿದ್ಯಾರ್ಥಿಗಳು ಸಾಕಷ್ಟು ಬಾರಿ ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿಲ್ಲ. ಆಷಾಢ ಮಾಸದಲ್ಲಿ ಪ್ರತಿ ವರ್ಷ ಗಾಳಿಪಟ ಹಬ್ಬ ಆಚರಿಸಲಾಗುತ್ತದೆ. ಕಾರ್ಟೂನ್ ಕೈಟ್, ಟ್ರೈ ಆ್ಯಂಗಲ್ ಕೈಟ್, ರೆಕ್ಟ್ ಆ್ಯಂಗಲ್ ಕೈಟ್, ಸ್ಕೈರ್ ಆ್ಯಂಗಲ್ ಕೈಟ್, ಸ್ಪೈಡರ್ ಮ್ಯಾನ್ ಕೈಟ್, ಬರ್ಡ್ ಹಾಗೂ ಡ್ರ್ಯಾಗನ್ ಕೈಟ್‌ಗಳನ್ನು ಮಕ್ಕಳು ತರುವ ಮೂಲಕ ಆಕಾಶದೆತ್ತರಕ್ಕೆ ಹಾರಿಸಿದ ಪರಿಯನ್ನ ನೆರೆದಿದ್ದ ಜನ ಸಾಮಾನ್ಯರು ಕಣ್ತುಂಬಿಕೊಂಡರು. ಸಂಸ್ಕಾರದ ಸಂಕೇತವಾಗಿ ಈ ಹಬ್ಬ ಆಚರಿಸಲಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.