ಚಿತ್ರದುರ್ಗ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅಕ್ರಮವಾಗಿ ಅನರ್ಹರು ಪಡೆದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಲು ಏಪ್ರಿಲ್ ತಿಂಗಳ ಅಂತ್ಯದವರೆಗೆ ಕಾಲಾವಕಾಶ ನೀಡಲಾಗಿದೆ.
ಅಕ್ರಮ ಬಿಪಿಎಲ್ ಪಡಿತರ ಚೀಟಿ ಹಿಂತಿರುಗಿಸಲು ಏಪ್ರಿಲ್‍ವರೆಗೆ ಗಡುವು - ಜಿಲ್ಲಾಧಿಕಾರಿ ವಿನೋತ್ ಪ್ರಿಯಾ
ಅನರ್ಹರು ಅಕ್ರಮವಾಗಿ ಪಡೆದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಏಪ್ರಿಲ್ ತಿಂಗಳ ಅಂತ್ಯದೊಳಗೆ ವಾಪಸ್ ನೀಡಬೇಕೆಂದು, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಗಡುವು ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಸರ್ಕಾರಿ ನೌಕರರು, ಖಾಸಗಿ ನೌಕರರು, ಸರ್ಕಾರಿ ಅನುದಾನಿತ ನೌಕರರು, ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಗಳು. ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬಗಳು. ವಾರ್ಷಿಕ ಆದಾಯವು 1.20 ಲಕ್ಷಗಿಂತಲೂ ಹೆಚ್ಚು ಇರುವ ಕುಟುಂಬಗಳು ಕಾರ್ಡ್ ಪಡೆದುಕೊಂಡಿದ್ದರೆ ಏಪ್ರಿಲ್ ಅಂತ್ಯದವರೆಗೆ ಬಿಪಿಎಲ್ ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು.
ಅನರ್ಹರು ನಿಗದಿತ ದಿನಾಂಕದೊಳಗೆ ಬಿಪಿಎಲ್ ಪಡಿತರ ಚೀಟಿಗಳನ್ನು ತಾಲೂಕು ಕಚೇರಿಯಲ್ಲಿರುವ ಆಹಾರ ಶಿರಸ್ತೆದಾರ್ ಅಥವಾ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ಎಪಿಎಲ್ ವರ್ಗಕ್ಕೆ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ತಾವೇ ಸ್ವತಃ ಪಡಿತರ ಚೀಟಿಗಳನ್ನು ಹಿಂತಿರುಗಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.