ಚಿತ್ರದುರ್ಗ: ರಾಜ್ಯದ ಮುಖ್ಯಮಂತ್ರಿಗಳು ಬದಲಾದರೆ ಯಡಿಯೂರಪ್ಪನವರಿಗೇನು ನಷ್ಟ ಇಲ್ಲ. ಆದರೆ ಪಕ್ಷಕ್ಕೆ ದೊಡ್ಡ ನಷ್ಟ ಉಂಟಾಗಬಹುದು. ಇದ್ದಕ್ಕಿದ್ದಂತೆ ಒಬ್ಬ ನಾಯಕ ಹುಟ್ಟುವುದಿಲ್ಲ. ಅದು ನಿಧಾನವಾಗಿ ಬರುವ ಪ್ರಕ್ರಿಯೆ. ಆದರೆ ಯಡಿಯೂರಪ್ಪನವರನ್ನು ಮಧ್ಯದಲ್ಲಿ ಬದಲಾಯಿಸಿದರೆ ತೊಂದರೆಯಾಗುವುದು ಖಚಿತ ಎಂದು ಸಿಎಂ ಯಡಿಯೂರಪ್ಪ ಪರ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿದ್ದಾರೆ.
ಇಂದು ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಬಿಎಸ್ವೈ ಅವರು ವಯಸ್ಸನ್ನು ಮೀರಿ ಯುವಕರಂತೆ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ಅದ್ಭುತವಾದದ್ದು. ಅವರ ರಾಜಕೀಯ ಅನುಭವ ಅಮೋಘವಾದುದು. ಪಕ್ಷದೊಳಗೆ ತೊಂದರೆಯಾಗಬಾರದು. ಅವರು ಶಕ್ತಿ ತೋರಿಸಬಲ್ಲರು. ಅಂತಹ ಮುತ್ಸದ್ಧಿ. ಅವರೊಬ್ಬ ಮಾಸ್ ಲೀಡರ್. ಎಲ್ಲ ಧರ್ಮ ಸಮುದಾಯದವರನ್ನು ಪ್ರೀತಿಯಿಂದ ನೋಡಿದ್ದಾರೆ. ಯಾವುದೇ ಸಂದರ್ಭದಲ್ಲಿ ಅವರ ಗೌರವ ಘನತೆಗೆ ಧಕ್ಕೆ ಬರುವಂತೆ ಮಾಡಬಾರದು. ನಿರಾತಂಕದ ವಾತಾವರಣ ಸೃಷ್ಟಿಸಬೇಕು. ಅವರನ್ನು ಮುಖ್ಯಮಂತ್ರಿಗಳಾಗಿ ಮುಂದುವರೆಸಬೇಕೆಂದು ಒತ್ತಾಯಿಸಿದ್ದಾರೆ.
ಆದರೆ ರಾಜ್ಯ ರಾಜಕಾರಣದಲ್ಲಿ ಒಂದಷ್ಟು ವ್ಯತ್ಯಾಸಗಳು, ಏರಿಳಿತಗಳು ಆಗುತ್ತಿವೆ. ಅದು ಎಲ್ಲರಲ್ಲೂ ಗಾಬರಿ ಮತ್ತು ಆತಂಕ ಸೃಷ್ಟಿಸಿದೆ. ನಿರಾತಂಕ, ಆತಂಕರಹಿತವಾದ ಆಡಳಿತ ನೀಡಬೇಕಾಗುತ್ತದೆ. ಆಂತರಿಕ ಬೇಗುದಿ ಇರಬಾರದು. ಒಂದು ಹಂತದಲ್ಲಿ ಆಂತರಿಕ ಕಚ್ಚಾಟ ಇರಬಾರದು. ಯಡಿಯೂರಪ್ಪ ನಾಡು ಕಂಡ ಶ್ರೇಷ್ಠ ರಾಜಕೀಯ ಮುತ್ಸದ್ಧಿಯಾಗಿದ್ದಾರೆ. ಏಕವ್ಯಕ್ತಿ ಹೋರಾಟ ಆರಂಭಿಸಿ ಸರ್ಕಾರ ರಚಿಸುವಷ್ಟರ ಮಟ್ಟಿಗೆ ಶಕ್ತಿಯನ್ನು ಪಡೆದುಕೊಂಡಿದ್ದಾರೆ.
4 ಬಾರಿ ಮುಖ್ಯಮಂತ್ರಿಯಾಗಿ ಕೊರೊನಾ ಸಂದರ್ಭದಲ್ಲಿ ಗಂಭೀರ ಪರಿಸ್ಥಿತಿಯನ್ನು ಚಾಕಚಕ್ಯತೆಯಿಂದ, ವ್ಯತ್ಯಾಸ ಬರದಂತೆ ಮಾನವೀಯತೆಯಿಂದ ಅದನ್ನು ನಿಭಾಯಿಸಿದ್ದಾರೆ. ಕೇಂದ್ರ ಸರ್ಕಾರವು ಸಹ ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದೆ. ಎಲ್ಲಿಯೂ ವಿಚಲಿತರಾಗದೆ ಮುಂಜಾಗ್ರತೆ ವಹಿಸಿ ಕೊರೊನಾವನ್ನು ನಿಯಂತ್ರಿಸಿದ್ದಾರೆ. ಈ ಸಂದರ್ಭದಲ್ಲಿ ನಾಯಕತ್ವದ ಬದಲಾವಣೆ ವಿಚಾರವು ರಾಜ್ಯದ ಜನರಲ್ಲಿ ಆತಂಕ ಸೃಷ್ಟಿಸಿದೆ. ಮುಖ್ಯಮಂತ್ರಿಗಳು ಬದಲಾದರೆ ನಾಡಿನ ಸಮಸ್ತ ಮಠಾಧೀಶರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ ಎಂದರು.
ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಶ್ರೀಗಳ ಹೇಳಿಕೆ: