ಚಿತ್ರದುರ್ಗ: ಜಿಲ್ಲೆಯಲ್ಲಿ ಬಾಲಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಹಲವು ಅನುಮಾನಕ್ಕೆ ದಾರಿಯಾದರೆ, ಇತ್ತ ಬಾಲಕ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಪಕ್ಕದ ಮನೆಯವರು ಕೊಲೆ ಮಾಡಿದ್ದಾರೆ ಎಂದು ನ್ಯಾಯ ನೀಡುವಂತೆ ಮೃತ ಬಾಲಕನ ಕುಟುಂಬಸ್ಥರು ಸದ್ಯ ಎಸ್ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಜನವರಿ 02 ನೇ ತಾರೀಖಿನಂದು ಚಿತ್ರದುರ್ಗ ತಾಲೂಕಿನ ಕಳ್ಳಿಹಟ್ಟಿ ಗ್ರಾಮದ ಅಪ್ರಾಪ್ತ ಬಾಲಕನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಳ್ಳಿಹಟ್ಟಿ ಜನ ಮಾತನಾಡುತ್ತಿದ್ದರು. ಆದರೆ, ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಮೃತ ಬಾಲಕನ ಸಾವಿಗೆ ನ್ಯಾಯ ನೀಡುವಂತೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಎಸ್ಪಿ ಕಚೇರಿಗೆ ಜಮಾಯಿಸಿ, ಬಾಲಕ ಆತ್ಮಹತ್ಯೆಗೆ ಶರಣಾಗಿಲ್ಲ, ಬದಲಾಗಿ ಪಕ್ಕದ ಮನೆಯ ತಿಮ್ಮರಾಯ ಎಂಬುವವನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ದೂರುತ್ತಿದ್ದಾರೆ.