ಚಿತ್ರದುರ್ಗ:ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ಜನರು ನೀರಿಗಾಗಿ ಕಿಲೋಮೀಟರ್ ದೂರ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಜಿಲ್ಲೆಯ ಜೀವನಾಡಿಯಾಗಿರುವ ವಾಣಿವಿಲಾಸ ಸಾಗರದ ನೀರಿಗಾಗಿ ರಾಜಕೀಯ ನಾಯಕರಲ್ಲಿ ಪೈಪೋಟಿ ಉಂಟಾಗಿದೆ. ಇಲ್ಲಿನ ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮೂರಿನ ಶಾಸಕರು ವಾಣಿವಿಲಾಸ ನೀರನ್ನು ಹರಿಸುವಂತೆ ಆಗ್ರಹಿಸುತ್ತಿದ್ದಾರೆ.
ಈ ಹಿಂದೆ ಚಳ್ಳಕೆರೆ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ ವೇದಾವತಿ ನದಿಗೆ ಸರ್ಕಾರದ ಆದೇಶಾನುಸಾರ 0.25 ಟಿಎಂಸಿ ನೀರು ಹರಿಸಲಾಗಿತ್ತು. ಅದರೆ ಆ ನೀರು ಚಳ್ಳಕೆರೆಗೆ ತಲುಪುವ ಮುನ್ನವೇ ಹಿರಿಯೂರು ಶಾಸಕಿ ನೀರಿನಲ್ಲು ರಾಜಕೀಯ ಮಾಡುವ ಮೂಲಕ ಪ್ರತಿಭಟಿಸಿ ನೀರನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಚಳ್ಳಕೆರೆ ಕೈ ಶಾಸಕ ರಘುಮೂರ್ತಿಯವರ ಕೆಂಗಣ್ಣಿಗೆ ಗುರಿಯಾಗಿತ್ತು.
ತಾಲೂಕಿಗೆ ವಾಣಿವಿಲಾಸ ಸಾಗರದ ನೀರು ಹರಿಸುವಂತೆ ಕೋರಿ ಶ್ರೀರಾಮುಲು ಪತ್ರ ಆದರೀಗ ಮೊಳಕಾಲ್ಮೂರು ಕ್ಷೇತ್ರದ ಗುಡಿಹಳ್ಳಿ, ಕ್ಯಾತಗೊಂಡನಹಳ್ಳಿ, ಕಸವಿಗೊಂಡನಹಳ್ಳಿಯ ಜನರಿಗೆ ಕುಡಿಯಲು ನೀರು ಬೇಕೆಂದು ಶಾಸಕ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಪತ್ರ ಬರೆದಿದ್ದಾರೆ.
ಇನ್ನು ಚಳ್ಳಕೆರೆ ಕಾಂಗ್ರೆಸ್ ಶಾಸಕ ರಘುಮೂರ್ತಿ ಮನವಿಯ ಮೇರೆಗೆ ವೇದಾವತಿ ನದಿಗೆ ಹರಿಸಿದ್ದ ನೀರನ್ನು ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮ ಶ್ರೀನಿವಾಸ್ ತಡೆಹಿಡಿದು ನೀರಿನಲ್ಲೂ ರಾಜಕೀಯ ಮಾಡಿರುವುದು ಜಿಲ್ಲೆಯ ಜನರನ್ನು ಹುಬ್ಬೇರಿಸುವಂತೆ ಮಾಡಿದೆ. ಇದೀಗ ಅವರದ್ದೇ ಸರ್ಕಾರದ ಸಚಿವರಾಗಿರುವ ಶ್ರೀರಾಮುಲು ವಿವಿ ಸಾಗರದಿಂದ ತಮ್ಮ ಮೊಳಕಾಲ್ಮೂರು ಕ್ಷೇತ್ರಕ್ಕೆ ನೀರು ಕೇಳುತ್ತಿದ್ದು, ಬಿಜೆಪಿ ಶಾಸಕಿ ಈ ಮನವಿಗೆ ಒಪ್ಪಿ ನೀರು ಹರಿಸಲು ಬಿಡುತ್ತಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.