ಚಿತ್ರದುರ್ಗ: ಮದುವೆಗಳನ್ನು ಅಡಂಬರದಿಂದ ಮಾಡುವವರೇ ಹೆಚ್ಚು. ಈ ವೇಳೆ ವಿವಿಧ ಭಕ್ಷ್ಯ ಭೋಜನಗಳನ್ನು ಬಡಿಸುವುದು ಸಾಮಾನ್ಯ. ಇದರಲ್ಲಿ ಬಹುತೇಕ ಖಾದ್ಯಗಳು ಆರೋಗ್ಯಕ್ಕೆ ಹಾನಿಕಾರಕ ಆಗಿರುತ್ತವೆ. ಆದ್ರೆ ಇಲ್ಲೋರ್ವ ರೈತ ಆರೋಗ್ಯಪೂರ್ಣ ಖಾದ್ಯದ ಮೂಲಕ ತನ್ನ ಮಗನ ಮದುವೆ ಮಾಡಿಸಿದ್ದಾರೆ.
ಹೌದು, ಇಲ್ಲೋರ್ವ ರೈತ ಆಧುನಿಕ ಜಗತ್ತಿನಲ್ಲಿ ನಶಿಸಿ ಹೋಗುತ್ತಿರುವ ಸಿರಿಧಾನ್ಯಗಳನ್ನು ಬಳಸಿ ಮಗನ ಮದುವೆಯಲ್ಲಿ ವಿಧ ವಿಧವಾದ ಭೋಜನ ಮಾಡಿ ಬಡಿಸಿದ್ದಾನೆ. ಇಂತಹದೊಂದು ಅಪರೂಪದ ಸಾವಯವ ಮದುವೆಗೆ ಇದೀಗ ಕೋಟೆನಾಡು ಚಿತ್ರದುರ್ಗ ಸಾಕ್ಷಿಯಾಗಿದೆ.
ಚಿತ್ರದುರ್ಗದಲ್ಲಿ ಸಿರಿಧಾನ್ಯಗಳಿಂದ ಕೂಡಿದ ವಿಶಿಷ್ಠವಾದ ವಿವಾಹ ಚಿತ್ರದುರ್ಗದ ಕೂಗಳತೆ ದೂರದಲ್ಲಿರುವ ಚಿಕ್ಕ ಕಬ್ಬಿಗೆರೆಯ ನಿವಾಸಿಯಾದ ರೈತ ಮುಖಂಡ ನಾಗರಾಜ್ ತನ್ನ ಮಗನ ಮದುವೆಯನ್ನು ಸಿರಿಧಾನ್ಯಗಳನ್ನು ಬಳಸಿ ರುಚಿಕರ ಆಹಾರವನ್ನು ತಯಾರಿಸಿ ಅದ್ಧೂರಿಯಾಗಿ ಮದುವೆಯನ್ನು ಮಾಡಿದ್ದಾರೆ. ಇದೇ ಮದುವೆಯಲ್ಲಿ ರೈತರೊಂದಿಗೆ ವಿಚಾರ ಸಂಕೀರ್ಣ ಆಯೋಜಿಸಿ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಿದ್ದಾನೆ.
ವರ ಅವಿ ಪಾಟೀಲ್ ಹಾಗೂ ವಧು ಕಾವ್ಯ ನವ ಜೀವನಕ್ಕೆ ಇಂದು ಕಾಲಿಟ್ಟಿವರು. ಸಿರಿಧಾನ್ಯ ಮದುವೆಯನ್ನು ಆಯೋಜಿಸಿದ್ದ ನಾಗರಾಜ್ ಇಡೀ ಗ್ರಾಮದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ಸಾವಯವ ಮದುವೆಯಲ್ಲಿ ಅಪ್ಪಟ ಸಿರಿಧಾನ್ಯಗಳನ್ನು ಬಳಸಿ ಕೊರಲೆ ಪಾಯಸಾ, ರಾಗಿ ದೋಸೆ, ಹಸಿ ಕಡಲೆ ಬೇಳೆ ಕೋಸಂಬರಿ, ನವಣೆ ಹಾಗೂ ಸಾವೆ ಅಕ್ಕಿಯ ಅನ್ನ, ನವಣೆ ಅಕ್ಕಿ ಬಿಸಿ ಬೇಳೆ ಬಾತ್, ಸಿಹಿ ಪೊಂಗಲ್, ಲೆಮೆನ್ ಟೀ, ರಾಗಿ ಸೂಪ್, ಸುವರ್ಣ ಗೆಡ್ಡೆ ಚಿಪ್ಸ್, ಆರ್ಕಾ ವಾಂಗಿ ಬಾತ್, ರಾಗಿ ಕೀಲ್, ಕೊರಲೆ ಸಾವೆ ಉಪ್ಪಿಟ್ಟು, ಹುಳ್ಳಿ ಕಾಳು ಸಾರು, ಮುಂತಾದ ವಿಧ ವಿಧವಾದ ಆರೋಗ್ಯ ಕಾಪಾಡುವ ಸಿರಿಧಾನ್ಯಗಳ ಖಾದ್ಯವನ್ನು ಮದುವೆಗೆ ಆಗಮಿಸಿದ್ದ ಜನ್ರು ಸವಿದಿದ್ದು ವಿಶೇಷವಾಗಿತ್ತು.
ಮೆದುಳಿಗೂ ಮೇವು :
ಇದನ್ನು ಹೊರತುಪಡಿಸಿ ಮದುವೆ ವೇದಿಕೆಯಲ್ಲೇ 'ಮೆದುಳಿಗೂ ಮೇವು' ಎಂಬ ಅರಿವಿನ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಸಿರಿಧಾನ್ಯಗಳ ಬಗ್ಗೆ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿತ್ತು.
ಮದುವೆ ಕಾರ್ಯಕ್ರಮದಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿ ಹಳ್ಳಿ ಚಂದ್ರಶೇಖರ್, ಸಾಣಿ ಹಳ್ಳಿ ಮಠದ ಪಂಡಿತರಾಧ್ಯ ಸ್ವಾಮೀಜಿ ಭಾಗವಹಿಸುವ ಮೂಲಕ ಆಧುನಿಕ ಜಗತ್ತಿನಲ್ಲಿ ಸೇವಿಸುತ್ತಿರುವ ವಿಷಾಹಾರವನ್ನು ಕಡೆಗಣಿಸಿ ಆರೋಗ್ಯ ಕಾಪಾಡುವ ಸಿರಿಧಾನ್ಯವನ್ನು ಬಳಸುವಂತೆ ಮದುವೆಯಲ್ಲಿ ನೆರದಿದ್ದ ಜನ್ರಲ್ಲಿ ಮನವಿ ಮಾಡಿಕೊಂಡರು. ಮತ್ತು ಮದುವೆಗೆ ಆಗಮಿಸಿದ ಜನರಿಗೆ ತಾಂಬೂಲ ಹಾಗೂ ಬಟ್ಟೆ ಬರೆಗಳನ್ನು ನೀಡದೆ ವಿವಿಧ ತಳಿಗಳ ಸಸಿಗಳನ್ನು ವಿತರಿಸಿದ್ದು ಕೂಡ ಅಚ್ಚರಿ ವಿಶೇಷ ಎನಿಸಿತ್ತು.
ಒಟ್ಟಾರೆ ಪ್ರಸ್ತುತ ದಿನಗಳಲ್ಲಿ ಮದುವೆಗೆ ಬಳಸುವ ಶಾಮಿಯಾನವನ್ನು ಕೂಡ ಉಪಯೋಗಿಸದೆ ರೈತ ನಾಗಾರಾಜ್ ಚಪ್ಪರ ಹಾಕಿ ಮದುವೆ ಕಾರ್ಯವನ್ನು ನಡೆಸಿದ್ದಾರೆ. ಅದೇನೆ ಆಗಲಿ, ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಕಡಿಮೆಯಾಗುತ್ತಿರುವ ಸಿರಿಧಾನ್ಯಗಳ ಆಹಾರವನ್ನು ಇಂದು ಜನರು ಆರೋಗ್ಯದ ದೃಷ್ಠಿಯಿಂದ ಸವಿದು ನವ ವಧು-ವರನನ್ನು ಹಾರೈಸಿದರು.