ಚಿತ್ರದುರ್ಗ : ಮುಂದಿನ ವರ್ಷ ನಡೆಯಲಿರುವ ಚುನಾವಣೆಗಾಗಿ ಬಿಜೆಪಿಯು ರಾಜ್ಯದಲ್ಲಿ ಕೋಮುಗಳ ನಡುವೆ ದ್ವೇಷದ ವಾತಾವರಣ ನಿರ್ಮಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಆಜಾನ್ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಈಗೇಕೆ ಅದರಿಂದ ತೊಂದರೆಯಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ವಾಗ್ದಾಳಿ ಖುರಾನ್ ಬರೆದಾಗ ಮೈಕ್ ವ್ಯವಸ್ಥೆ ಇರಲಿಲ್ಲ: ತಂತ್ರಜ್ಞಾನ ಬೆಳೆದಂತೆ ಹೊಸ ಆವಿಷ್ಕಾರ ಬರುತ್ತವೆ. ಖುರಾನ್ ಬರೆದಾಗ ಮೈಕ್ ವ್ಯವಸ್ಥೆ ಇರಲಿಲ್ಲ. ದೇಗುಲಗಳಲ್ಲೂ ಧ್ವನಿವರ್ಧಕ ಬಳಸುತ್ತಾರೆ, ಮಸೀದಿಯಲ್ಲೂ ಧ್ವನಿವರ್ಧಕ ಬಳಸುತ್ತಾರೆ. ಧ್ವನಿವರ್ಧಕ ಬಳಕೆಯಿಂದ ತೊಂದರೆ ಏನಾಗಿದೆ. ಖುರಾನ್ ಕಾಲದಲ್ಲಿ ಇಲ್ಲದೆ ಇರಬಹುದು, ಆಗ ವಿದ್ಯುಚ್ಛಕ್ತಿ ಇರಲಿಲ್ಲ, ಅದಕ್ಕೆ ಮಾಡುತ್ತಿರಲಿಲ್ಲ. ದೇವಸ್ಥಾನಗಳಲ್ಲಿ, ಮಸೀದಿಗಳಲ್ಲಿ ಹಾಗೂ ಚರ್ಚ್‌ಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದು ಸಾಮಾನ್ಯ. ಈ ಸಂಪ್ರದಾಯ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ ಬಿಜೆಪಿ ಮತಕ್ಕಾಗಿ ಕೋಮುಭಾವನೆಯನ್ನು ಕೆರಳಿಸುವ ಹುನ್ನಾರ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಓರ್ವ ಮತಾಂಧನ ಬಗ್ಗೆ ನಾನು ಮಾತನಾಡುವುದಿಲ್ಲ : ಆಜಾನ್ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿದ್ದರಾಮಯ್ಯ, ಓರ್ವ ಮತಾಂಧನ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಗೆ ರಾಜ್ಯದ ಕೋಮು ಸಾಮರಸ್ಯಕ್ಕಿಂತ ಚುನಾವಣಾ ಗೆಲುವೇ ಮುಖ್ಯವಾಗಿದೆ. ಹೀಗಾಗಿಯೇ ರಾಜ್ಯದಲ್ಲಿ ಕೋಮುದ್ವೇಷನ್ನು ಹಬ್ಬಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಬೆಲೆ ಏರಿಕೆ ಮರೆಮಾಚಲು ವಿವಾದ ಸೃಷ್ಟಿ: ಆರಗ ಜ್ಞಾನೇಂದ್ರ ಗೃಹ ಸಚಿವರಾಗಿ ಸಂಪೂರ್ಣ ವಿಫಲರಾಗಿದ್ದಾರೆ. ಚುನಾವಣೆಗಾಗಿ ಬಿಜೆಪಿಯವರು ಆಜಾನ್ ವಿವಾದ ಸೃಷ್ಟಿಸುತ್ತಿದ್ದಾರೆ. ಬಿಜೆಪಿಗೆ ಜನಪರವಾದ ವಿಷಯಗಳಿಲ್ಲ, ಅಭಿವೃದ್ಧಿ ಮಾಡಿಲ್ಲ. ಬೆಲೆ ಏರಿಕೆ ಗಗನಕ್ಕೇರಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿದೆ. ವಿದ್ಯುತ್, ಔಷಧಿ ದರ ಎಲ್ಲಾ ಏರಿಕೆ ಆಗಿದೆ. ಇದನ್ನು ಮರೆಮಾಚಲು ಬಿಜೆಪಿ ಸರ್ಕಾರ ಹಿಜಾಬ್, ಜಾತ್ರೆ, ವ್ಯಾಪಾರ, ಹಲಾಲ್, ಭಗವದ್ಗೀತೆ, ಆಜಾನ್ ಎಂದು ವಿವಾದ ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ : ಈ ದೇಶದಲ್ಲಿ ಅಶಾಂತಿಯ ವಾತಾವರಣವನ್ನು ನಿರ್ಮಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿ ಹೆಣೆದಿರುವ ಈ ಕೋಮು ಸಂಘರ್ಷದ ಜಾಲವನ್ನು ಕಾಂಗ್ರೆಸ್ ಚೂರು ಚೂರು ಮಾಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇದೆ ಸಂದರ್ಭದಲ್ಲಿ ಹೇಳಿದ್ದಾರೆ.
ಆರಗ ಜ್ಞಾನೇಂದ್ರ ಆರೋಪಕ್ಕೆ ಪ್ರತಿಕ್ರಿಯೆ : ಹಿಜಾಬ್ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಮೌನವಹಿಸಿದ್ದಾರೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಬಿಜೆಪಿಯ ಕೋಮುದ್ವೇಷದ ಹುನ್ನಾರವನ್ನು ಚೆನ್ನಾಗಿ ಬಲ್ಲೆವು. ಯಾರು ಮಾತಾಡಬೇಕೋ ಅವರೇ ಮಾತಾಡಬೇಕು. ಎಲ್ಲರೂ ಪ್ರತಿಕ್ರಿಯಿಸಬಾರದೆಂದು ಸೂಚನೆ ನೀಡಿದ್ದು ನಿಜ. ನಾವು ಯಾವ ಸಿಂಹಾಸನ ಇಟ್ಟುಕೊಂಡಿಲ್ಲ, ಪ್ರಜಾಪ್ರಭುತ್ವ ಪಾಲಿಸುತ್ತೇವೆ. ಕಾಂಗ್ರೆಸ್ ಪಕ್ಷ ಜವಾಬ್ದಾರಿ ಸ್ಥಾನ ನಿರ್ವಹಿಸುತ್ತಿದೆ ಎಂದು ತಿರುಗೇಟು ನೀಡಿದರು.
ಈಶ್ವರಪ್ಪ ಹೇಳಿಕೆಗೆ ಟಾಂಗ್: ಸಚಿವ ಈಶ್ವರಪ್ಪ ದೇಶದ್ರೋಹಿ, ರಾಷ್ಟ್ರಧ್ವಜ ದ್ರೋಹಿ, ಸಂವಿಧಾನ ದ್ರೋಹಿ. ಅವರಿಗೆಲ್ಲಾ ನಾನು ಪ್ರತಿಕ್ರಿಯಿಸಲ್ಲ. ಸಿಎಂ ಮಾತಿಗೆ ಉತ್ತರ ಕೊಡಬಹುದು, ರಸ್ತೇಲಿ ಹೋಗೋರಿಗೆಲ್ಲ ಉತ್ತರಿಸಲ್ಲ ಎಂದು ಟಾಂಗ್ ಕೊಟ್ಟರು. ಹಿರಿಯೂರಿನಲ್ಲಿ ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಆಂತರಿಕ ಸ್ಪರ್ಧೆ ಪಕ್ಷ ಸಂಘಟನೆಗೆ ಸಹಕಾರಿ ಎಂದು ಸಮರ್ಥಿಸಿಕೊಂಡರು.